ಡ್ರಗ್ಸ್ ದುಷ್ಪರಿಣಾಮ ದಂಡ, ಶಿಕ್ಷೆ ಬಗ್ಗೆ ಫಲಕ ಅಳವಡಿಸಿ; ವಿದ್ಯಾರ್ಥಿಗಳ ಚಲನವಲನ ಗಮನಿಸಿ; ಅಧಿಕಾರಿಗಳಿಗೆ, ಉಪನ್ಯಾಸಕರಿಗೆ ಡಿಸಿ ದಾನಮ್ಮನವರ ಸೂಚನೆ

18 HVR 2
Published on

ಹಾವೇರಿ: ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹಾಗೂ ಕಾನೂನಿನಡಿ ವಿಧಿಸುವ ದಂಡ ಮತ್ತು ಶಿಕ್ಷೆ ಬಗ್ಗೆ ಜಿಲ್ಲೆಯ ಎಲ್ಲ ಪದವಿಪೂರ್ವ, ಪದವಿ, ಐಟಿಐ, ಡಿಪ್ಲೋಮಾ, ವೈದ್ಯಕೀಯ ಹಾಗೂ ಇಂಜಿನಿಯರ್ ಕಾಲೇಜ್‌ಗಳಲ್ಲಿ ಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಖಡಕ್ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾರ್ಕೊ ಸಮನ್ವಯ ಕೇಂದ್ರ (ಎನ್‌ಸಿಒಆರ್‌ಡಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವ ಜನಾಂಗಕ್ಕೆ ಮಾದಕ ವಸ್ತುಗಳಿಂದ ಉಂಟಾಗುವ ತೊಂದರಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆಯಾ ಕಾಲೇಜ್‌ಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಚಲನವಲನ ಗಮನಿಸುತ್ತಿರಬೇಕು ಎಂದರು.

ಈಗಾಗಲೇ ಎಲ್ಲ ಪದವಿಪೂರ್ವ ಸೇರಿದಂತೆ ಎಲ್ಲ ಕಾಲೇಜ್‌ಗಳು, ವಿದ್ಯಾರ್ಥಿ ನಿಲಯಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಹಾಗೂ ‘ಆ್ಯಂಟಿ ಡ್ರಗ್ ಸ್ಕ್ವಾಡ್ ಕಮಿಟಿ’ ಮಾಡಲು ಸೂಚಿಸಲಾಗಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಕಮಿಟಿ ರಚನೆ ಬಗ್ಗೆ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಗೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು.

ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ವಾಹನ ಚಾಲಕರು ಖಾಸಗಿ ವ್ಯಕ್ತಿಗಳ ಪಾರ್ಸಲ್‌ಗಳನ್ನು ತೆಗದೆದುಕೊಳ್ಳದಂತೆ ಸೂಚನೆ ನೀಡುವಂತೆ ಕೆ.ಎಸ್.ಆರ್.ಟಿ.ಸಿ. ಹಾವೇರಿ ವಿಭಾಗದ ಕಚೇರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಆಯೋಜಿಸುವ ಸಭೆಯ ಬಗ್ಗೆ ಮೊದಲೇ ಮಾಹಿತಿ ನೀಡಿದಲ್ಲಿ ಪೊಲೀಸ್ ಇಲಾಖೆಯಿಂದ ಶಿಕ್ಷಕರಿಗೆ ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಕಾನೂನಡಿ ದಂಡ ಹಾಗೂ ಶಿಕ್ಷೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮಾದಕ ವ್ಯಸನಿಗಳ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಎಂದರು.

ಡ್ರಗ್ಸ್ ಫ್ರೀ ಕರ್ನಾಟಕ ಆ್ಯಪ್ ಬಗ್ಗೆ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆ ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಅರಣ್ಯ, ಕೃಷಿ, ಅಬಕಾರಿ, ವೈದ್ಯಕೀಯ ಕಾಲೇಜ್, ಪದವಿಪೂರ್ವ ಶಿಕ್ಷಣ ಇಲಾಖೆ, ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಅರಣ್ಯದಲ್ಲಿ ಗಾಂಜಾ ಪರಿಶೀಲಿಸಿ

ಕೃಷಿ, ತೋಟಗಾರಿಕೆ ಪ್ರದೇಶಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಗಾಂಜಾ ಹಾಗೂ ಇತರೆ ಮಾದಕ ಪದಾರ್ಥಗಳ ಬೆಳೆ ಬೆಳೆಯುತ್ತಿರುವ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅನಿರೀಕ್ಷಿತ ದಾಳಿ ಮಾಡಿ

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಅನೀರೀಕ್ಷಿತ ಭೇಟಿ ನೀಡುವ ಮೂಲಕ ಮಾದಕ ವಸ್ತುಗಳ ಬಳಕೆ ಕುರಿತು ಪರಿಶೀಲನೆ ಮಾಡಬೇಕು. ಜತೆಗೆ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈದಿಗಳಿಗೆ ಆಪ್ತ ಸಮಾಲೋಚನೆ

ಜೈಲಿನಲ್ಲಿರುವ ಕೈದಿಗಳಿಗೆ ಮಾದಕ ವಸ್ತುಗಳ ವ್ಯಸನಿಗೆ ಮನೋವೈದ್ಯರಿಂದ ಆಪ್ತ ಸಮಾಲೋಚನೆ ಮಾಡಿಸಬೇಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾ ಕಾರಾಗೃಹ ಅಧೀಕ್ಷಕರಿಗೆ ಡಿಸಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net