ಗಾಂಜಾ ಬೆಳೆ, ಡ್ರಗ್ಸ್ ಸಾಗಣೆ ಬಗ್ಗೆ ನಿಗಾ ವಹಿಸಿ; ನಾರ್ಕೊ ಸಮನ್ವಯ ಸಭೆಯಲ್ಲಿ ಡಿಸಿ ದಾನಮ್ಮನವರ ಸೂಚನೆ

1 HVR 2
Published on

ಹಾವೇರಿ: ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಹಾಗೂ ಇತರೆ ಮಾದಕ ಪದಾರ್ಥಗಳ ಬೆಳೆ ಬೆಳೆಯುತ್ತಿರುವ ಕುರಿತು ಕಾಲಕಾಲಕ್ಕೆ ಆಯಾ ಇಲಾಖೆಗಳು ಪರಿಶೀಲನೆ ನಡೆಸಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಬೆಳೆ ನಾಶಪಡಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾರ್ಕೊ ಸಮನ್ವಯ ಕೇಂದ್ರ (ಎನ್‌ಸಿಒಆರ್‌ಡಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ದೇಶದಲ್ಲಿ ದೊಡ್ಡ ದೊಡ್ಡ ಡ್ರಗ್ಸ್ ಜಾಲಗಳು ಪತ್ತೆಯಾಗಿದ್ದು, ಡ್ರಗ್ಸ್ ಕಳ್ಳ ಸಾಗಾಣಿಕೆ ತಡೆಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ಶಾಲೆ, ಕಾಲೇಜ್‌ಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಮಾರ್ಚ್ ಅಂತ್ಯದೊಳಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿವಿಧ ಇಲಾಖೆ ಅಧಿಕಾರಿಗಳು ಸಮಯನ್ವಯದಿಂದ ಮಾಡಬೇಕು. ಚಿಕಿತ್ಸೆಗೆ ದಾಖಲಾಗುವ ಮಾದಕ ವಸ್ತುಗಳ ವ್ಯಸನಿಗಳ ಹಿನ್ನೆಲೆ ಕಲೆ ಹಾಬೇಕು. ಇದರಿಂದ ಮಾದಕ ವಸ್ತುಗಳ ಮಾರಾಟ ತಡೆಗೆ ಸಹಕಾರವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು, ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾದಕ ವ್ಯಸನಿಗಳ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ. ಅರಣ್ಯ ಪ್ರದೇಶದಲ್ಲಿ ಮಾದಕ ಬೆಳೆಗಳ ಸಂಶಯ ಕಂಡುಬಂದಲ್ಲಿ ಪೊಲೀಸ್ ಇಲಾಖೆಯಿಂದ ಪರಿಶೀಲನೆಗೆ ಆಪರೇಟರ್ ಸಹಿತ ಡ್ರೋನ್ ಸಹ ನೀಡಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

247 ಜಾಗೃತಿ ಕಾರ್ಯಕ್ರಮ: 2022ರಲ್ಲಿ 69, 2023ರಲ್ಲಿ 85 ಹಾಗೂ 2024ರಲ್ಲಿ 93 ಸೇರಿ ಒಟ್ಟು 247 ಶಾಲಾ-ಕಾಲೇಜ್‌ಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ, ಅರಣ್ಯ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

3 ವರ್ಷದಲ್ಲಿ 114 ಕೆ.ಜಿ ಮಾದಕ ವಸ್ತು ವಶ

2022ರಲ್ಲಿ 9 ಪ್ರಕರಣಗಳಲ್ಲಿ 3,65,450 ರೂ. ಮೊತ್ತದ 35.888 ಕೆ.ಜಿ ಮಾದಕ ವಸ್ತು, 2023ರಲ್ಲಿ 10 ಪ್ರಕರಣಗಳಲ್ಲಿ 7,79,600 ರೂ. ಮೊತ್ತದ 41.576 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. 2024ರಲ್ಲಿ 11 ಪ್ರಕರಣಗಳಲ್ಲಿ 13,79,955 ರೂ. ಮೊತ್ತದ 36.120 ಕೆ.ಜಿ. ಹಾಗೂ ಜನವರಿ 2025ರಲ್ಲಿ ಒಂದು ಪ್ರಕರಣದಲ್ಲಿ 18,920 ರೂ. ಮೊತ್ತ ಸೇರಿ ಈವರೆಗೆ 31 ಪ್ರಕರಣಗಳಲ್ಲಿ 25,61,925 ರೂ. ಮೌಲ್ಯದ 114.50 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಹಾಗೂ 80 ಜನರು ಆರೋಪಿತರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಅಂಶುಕುಮಾರ ವಿವರಿಸಿದರು.

ಆ್ಯಪ್ ಬಳಕೆಗೆ ಸಲಹೆ

ಮಾದಕ ವಸ್ತುಗಳ ಬಳಕೆ ನಿಯಂತ್ರಿಸಲು ‘ಡ್ರಗ್ಸ್ ಫ್ರೀ ಕರ್ನಾಟಕ’ ಆ್ಯಪ್ ಬಿಡುಗಡೆ ಮಾಡಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಇದನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಡ್ರಗ್ಸ್ ಕಳ್ಳ ಸಾಗಣೆ ಹಾಗೂ ಮಾದಕ ವ್ಯಸನಿಗಳು ಕಂಡು ಬಂದಲ್ಲಿ ಆ್ಯಪ್‌ನಲ್ಲಿ ದಾಖಲಿಸಿದರೆ, ಈ ಸಂದೇಶ ಪೊಲೀಸ್ ಇಲಾಖೆಗೆ ರವಾನೆಯಾಗುತ್ತದೆ. ಇದರಿಂದ ಮಾದಕ ವಸ್ತುಗಳ ಹಾವಳಿ ತಡೆಗೆ ಸಾಧ್ಯವಾಗುತ್ತದೆ ಎಂದು ಎಸ್‌ಪಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net