ಸಮರ್ಪಕವಾಗಿ ಬೀಜ, ಗೊಬ್ಬರ ವಿತರಿಸಿ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

30 HVR 4
Published on

ಹಾವೇರಿ: ಮುಂಗಾರು ಬಿತ್ತನೆಗೆ ರೈತರಿಗೆ ಅಗತ್ಯ ಬೀಜ-ಗೊಬ್ಬರ ವಿತರಣೆಯಲ್ಲಿ ಯಾವುದೇ ಗೊಂದಲ, ತೊಂದರೆ ಉಂಟಾಗದಂತೆ ವ್ಯವಸ್ಥಿತವಾಗಿ ವಿತರಣೆಗೆ ಕ್ರಮ ವಹಿಸುವಂತೆ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಹಂಚಿಕೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಯಾವುದೇ ಕೊರತೆ ಉಂಟಾಗಬಾರದು ಎಂದು ತಿಳಿಸಿದರು.
ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ನೀಡಲಾಗುವ ಎಲ್ಲ ಕೃಷಿ ಪರಿಕರಗಳನ್ನು ಪ್ರಸಕ್ತ 2023ರ ಮುಂಗಾರು ಹಂಗಾಮಿನಿಂದ ಕ್ಯೂಆರ್ ಕೋಡ್ ಕಡ್ಡಾಯವಾಗಿಸಿರುವ ಹಿನ್ನೆಲೆಯಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರಿಸುವ ಮುನ್ನ ಬೀಜಗಳ ಪ್ಯಾಕೇಟ್ ಮೇಲೆ ಕ್ಯೂಆರ್ ಕೋಡ್ ನಮೂದಿಸಿರುವುದನ್ನು ಖಾತ್ರಿಪಡಿಸಿಕೊಂಡು ನಂತರ ದಾಸ್ತಾನಿಕರಿಸಬೇಕು. ಬೀಜ ವಿತರಣೆ ವೇಳೆ ಪ್ರತಿ ಪ್ಯಾಕೆಟ್‌ಅನ್ನು ಸ್ಕ್ಯಾನ್ಯ್ ಮಾಡಿ, ಖಛಿಛಿ ಐಖ ನಲ್ಲಿ ಕ್ಕಿ ಇಟಛಿ ಮತ್ತು ಇತರೆ ವಿವರಗಳು ದಾಖಲಾದ ನಂತರ ಬೀಜ ವಿತರಿಸಬೇಕು. ಈ ವಿಚಾರದಲ್ಲಿ ರೈತರಿಗೆ ಗೊಂದಲವಾಗಬಾರದು. ಮಾಹಿತಿಯ ಕೊರತೆ ಉಂಟಾಗಬಾರದು. ಈ ಮಾಹಿತಿಯನ್ನು ಮುಂಚಿತವಾಗಿಯೇ ರೈತರಿಗೆ ತಿಳಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಎಚ್ಚರವಹಿಸಿ: ಇದೇ ಸಂದರ್ಭದಲ್ಲಿ ಬಿತ್ತನೆ ಬೀಜಗಳ ಹಾಗೂ ರಸಗೊಬ್ಬರ ಸರಬರಾಜು ಕಂಪನಿಗಳ ಪ್ರತಿನಿಧಿಗಳು ಹಾಗೂ ದಾಸ್ತಾನು ಮಳಿಗೆಗಳ ಅಧಿಕಾರಿಗಳಿಂದ ಮುಂಗಾರು ಬಿತ್ತನೆ ಬೀಜಗಳ, ರಸಗೊಬ್ಬರಗಳ ಪೂರೈಕೆ, ದಾಸ್ತಾನು ಸಾಮರ್ಥ್ಯದ ಮಾಹಿತಿ ಪಡೆದುಕೊಂಡರು. ಕೆಲವೊಮ್ಮೆ ನಿರ್ದಿಷ್ಟ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಉಂಟಾದಲ್ಲಿ ಪೂರೈಕೆಗೆ ಬೇಕಾಗುವ ಸಮಯ, ದಾಸ್ತಾನು ಕುರಿತಂತೆ ವಿಸ್ತಾರವಾಗಿ ಚರ್ಚಿಸಿದರು. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆಬೀಜ ವಿತರಣೆಗೆ ಯಾವುದೇ ತೊಂದರೆಯಾಗದಂತೆ ಸಿದ್ದತೆ ಮಾಡಿಕೊಳ್ಳಬೇಕು. ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದರು.
ಸೌಮ್ಯವಾಗಿ ವರ್ತಿಸಿ: ರೈತರೊಂದಿಗೆ ಸೌಮ್ಯವಾಗಿ ವರ್ತಿಸಿ, ಅಹವಾಲುಗಳನ್ನು, ಸಮಸ್ಯೆಗಳನ್ನು, ಸಮಚಿತ್ತದಿಂದ ಆಲಿಸಿ ನಿಯಮಗಳ ಚೌಕಟ್ಟಿನಲ್ಲಿ ಪರಿಹರಿಸಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯಿಂದ ಕೈಗೊಂಡಿರುವ ಸಿದ್ಧತೆ ಕುರಿತಾಗಿ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ವಾರ್ಷಿಕ 800 ಮಿ.ಮಿ ವಾಡಿಕೆ ಮಳೆಯಿದ್ದು, ಜನವರಿಯಿಂದ ಈವರೆಗೆ ಅಂತ್ಯದವರೆಗೆ 119.90 ಮಿ.ಮಿ ವಾಡಿಕೆ ಮಳೆಗೆ 61.70 ಮಿ.ಮಿ ಮಳೆಯಾಗಿದೆ. ಮೇನಲ್ಲಿ 71 ಎಂ.ಎಂ. ಮಳೆ ಬದಲು ಶೇ.46 ಎಂ.ಎಂ. ಮಳೆಯಾಗಿದೆ. ವಾಡಿಕೆ ಮಳೆ ಎದುರು ಶೇ.64.79ರಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಗೋವಿನಜೋಳ 2,04,689 ಹೆಕ್ಟೇರ್, ಹತ್ತಿ 46,702 ಹೆಕ್ಟೇರ್, ಭತ್ತ 33,715 ಹೆಕ್ಟೇರ್, ಶೇಂಗಾ 19,519 ಹೆಕ್ಟೇರ್, ಸೋಯಾಬೀನ್ 14,401 ಹೆಕ್ಟೇರ್, ಕಬ್ಬು 8.416 ಹೆಕ್ಟೇರ್, ಹೆಸರು 567 ಹೆಕ್ಟೇರ್ ಹಾಗೂ 2,438 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ, ರೇಷ್ಮೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲೆಯ ಕೃಷಿ ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕಂಪನಿಯ ಪ್ರತಿನಿಧಿಗಳು ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net