

ಹಾವೇರಿ: ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಕಟ್ಟಡಗಳ ಮಂಜೂರಾತಿ ಬಾಕಿ, ಪ್ರಸ್ತಾವನೆ ಸಲ್ಲಿಸಬೇಕಿರುವ ಯೋಜನೆಗಳು, ಯೋಜನೆಗಳ ಅನುಷ್ಠಾನದ ಮಾಹಿತಿಯೊಂದಿಗೆ ಸರ್ಕಾರದ ಹಂತದಲ್ಲಿ ಬಾಕಿ ಉಳಿದಿರುವ ಪ್ರಸ್ತಾವನೆಗಳ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕಟ್ಟಡಗಳು ಆರಂಭಿಸಿದ್ದರೆ ಪ್ರಗತಿಯ ವಿವರ, ಹಸ್ತಾಂತರಕ್ಕೆ ಬಾಕಿ ಇರುವ ಕಟ್ಟಡಗಳು ಒಳಗೊಂಡಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮುದಾಯ ಭವನ ನಿರ್ಮಾಣ, ಸಾಂಸ್ಕೃತಿಕ ಭವನಗಳು, ವಸತಿ ನಿಲಯಗಳು, ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ಮಂಜೂರಾತಿಗೆ ಬಾಕಿ ಉಳಿದಿರುವ ಹಾಗೂ ಕಟ್ಟಡಗಳ ಬಾಕಿ ಉಳಿದಿರುವ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಕೈಗಾರಿಕೆ ಮತ್ತು ಜವಳಿ ಇಲಾಖೆಯಿಂದ ಜಿಲ್ಲೆಯಲ್ಲಿರುವ ಕೈಗಾರಿಕಾ ಘಟಕಗಳು, ಕೈಗಾರಿಕಾ ಪಾರ್ಕ್‌ಗಳು, ಎಫ್.ಬಿ.ಒಗಳು, ಹ್ಯಾಂಡ್‌ಲೂಮ್ ಹಾಗೂ ಪವರ್‌ಲೂಮ್‌ಗಳ ಮಾಹಿತಿ, ಉದ್ಯೋಗ ಅವಲಂಬಿತರ ಮಾಹಿತಿ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲ ತಾಲೂಕು ಕ್ರೀಡಾಂಗಣಗಳ ಸ್ಥಿತಿಗತಿಗಳ ಕುರಿತಂತೆ ಪರಿಶೀಲನೆ ನಡೆಸಿ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲು ಗಮನಹರಿಸಬೇಕು. ಈ ಕುರಿತಂತೆ ತಾಲೂಕು ನೋಡಲ್ ಅಧಿಕಾರಿಗಳು ಪ್ರವಾಸದ ಸಂದರ್ಭದಲ್ಲಿ ತಾಲೂಕು ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳ ಮಾಹಿತಿಯ ಜತೆಗೆ ಈಗಾಗಲೇ ಆರಂಭಿಸಲಾದ ಮೂರು ಇಂದಿರಾ ಕ್ಯಾಂಟಿನ್‌ಗಳ ಮೆನುಗಳ ಮಾಹಿತಿ ಹಾಗೂ ಕ್ಯಾಂಟಿನ್‌ಗಳಲ್ಲಿ ಊಟ-ಉಪಹಾರ ಪಡೆಯುತ್ತಿರುವವರ ಸಂಖ್ಯೆಯನ್ನು ಸಂಗ್ರಹಿಸಬೇಕು. ಹೊಸದಾಗಿ ಪ್ರಸ್ತಾವನೆ ಸಲ್ಲಿಸಿರುವ ಏಳು ಇಂದಿರಾ ಕ್ಯಾಂಟಿನ್‌ಗಳ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲೆಯಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಹಾಗೂ ಐಪಿಸೆಟ್ ಮತ್ತು ನಾನ್ ಐಪಿಸೆಟ್‌ಗಳ ಮಾಹಿತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು. ಕಾಡು ಪ್ರಾಣಿಗಳಿಂದ ಉಂಟಾದ ಬೆಳೆಹಾನಿಗೆ ತ್ವರಿತ ಪರಿಹಾರ ವಿತರಣೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಪ್ರಗತಿ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯುವನಿಧಿಗೆ ಸಜ್ಜಾಗಿ
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಅನುಷ್ಠಾನಕ್ಕೆ ಈಗಿನಿಂದಲೇ ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ, ಮಾನವ ಸಂಪನ್ಮೂಲದ ಅಗತ್ಯತೆ ಕುರಿತಂತೆ ವಿವರವಾದ ಮಾಹಿತಿ ಸಲ್ಲಿಸಿ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪದವಿವಾರು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡವರ ಮಾಹಿತಿ ಹಾಗೂ ಉದ್ಯೋಗಾವಕಾಶಗಳು ದೊರೆತ ವಿವರವನ್ನು ಸಲ್ಲಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗೆ ಡಿಸಿ ಸೂಚಿಸಿದರು.