

ಹಾವೇರಿ: ಬೆಳೆ ಪರಿಹಾರ ಪಡೆಯಲು ರೈತರ ಹೆಸರಿನಲ್ಲಿರುವ ಸರ್ವೇ ನಂಬರುವಾರು ಜಮೀನುಗಳ ವಿಸ್ತೀರ್ಣದ ಎಲ್ಲ ದತ್ತಾಂಶವನ್ನು ಫ್ರೂಟ್ ಐಡಿಯಲ್ಲಿ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆಯ ತಂತ್ರಾಂಶ) ದಾಖಲು ಮಾಡುವುದು ಕಡ್ಡಾಯವಾಗಿದೆ. ಬಾಕಿ ದತ್ತಾಂಶ ದಾಖಲಾತಿಯನ್ನು ಮೂರು ದಿನದೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಸಿದ್ದ ರೈತರ ಬೆಳೆ ಮಾಹಿತಿಯನ್ನು ಫ್ರೂಟ್ ಐಡಿಯಲ್ಲಿ ದಾಖಲಿಸಿರುವ ಪ್ರಗತಿ ಕುರಿತ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಫ್ರೂಟ್ ಐಡಿಯಲ್ಲಿ ಒಬ್ಬ ರೈತನಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸರ್ವೇ ನಂಬರಗಳು ಹಾಗೂ ಆಯಾ ಸರ್ವೇ ನಂಬರಿನ ಜಮೀನಿನ ವಿಸ್ತೀರ್ಣದ ಮಾಹಿತಿ ದಾಖಲಿಸಿದರೆ ಮಾತ್ರ ಪರಿಹಾರ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ರೈತರು ತಮ್ಮ ಜಮೀನಿನ ಸರ್ವೇ ನಂಬರವಾರು ಜಮೀನಿನ ವಿಸ್ತೀರ್ಣ ಮಾಹಿತಿಯನ್ನು ದಾಖಲಿಸಬೇಕು ಎಂದು ತಿಳಿಸಿದರು.
ಕೆಲ ರೈತರು ಫ್ರೂಟ್ ಐಡಿ ಹೊಂದಿದ್ದರೂ ಹಲವು ಸರ್ವೇ ನಂಬರ್‌ನಲ್ಲಿ ಜಮೀನು ಇದ್ದರೂ ಈ ಎಲ್ಲ ಸರ್ವೇ ನಂಬರ್‌ಗಳ ಜಮೀನುಗಳನ್ನು ದಾಖಲಿಸಿಲ್ಲ. ಕೇವಲ ಒಂದು, ಎರಡು ಸರ್ವೇ ನಂಬರ್‌ಗಳ ಜಮೀನುಗಳ ವಿಸ್ತೀರ್ಣ ದಾಖಲಿಸಿದ್ದಾರೆ. ಕೆಲ ರೈತರು ಜಮೀನು ಹೊಂದಿದ್ದರೂ ಫ್ರೂಟ್ ಐಡಿ ಮಾಡಿಕೊಂಡಿಲ್ಲ. ಹಾಗಾಗಿ, ಜಮೀನಿನ ವಿಸ್ತೀರ್ಣ ದಾಖಲಿಸಲು ಸಾಧ್ಯವಾಗಿಲ್ಲ. ಇಂತಹ ರೈತರು ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರಗಳು, ಗ್ರಾಮ ಆಡಳಿತಾಧಿಕಾರಿಗಳ ಬಳಿ ತೆರಳಿ ಸರ್ವೇ ನಂಬರ್‌ವಾರು ಮಾಹಿತಿ ನೀಡಿ ಫ್ರೂಟ್ ಐಡಿಯಲ್ಲಿ ದಾಖಲಿಸಬೇಕು ಎಂದರು.
ಶೇ.90 ರಷ್ಟು ಗುರಿ: ಶನಿವಾರ, ಭಾನುವಾರ ಹಾಗೂ ಸೋಮವಾರದ ರಜೆ ಮಾಡದೇ ಈ ಮೂರು ದಿನ ಕೆಲಸ ಮಾಡಿ ಶೇ.90ರಷ್ಟು ಗುರಿ ಸಾಧಿಸಿ. ಜಿಲ್ಲೆಯಲ್ಲಿ ಈವರೆಗೆ ಫ್ರೂಟ್ ಐಡಿಯಲ್ಲಿ ಶೇ.76ರಷ್ಟು ದತ್ತಾಂಶ ದಾಖಲೀಕರಿಸಲಾಗಿದೆ. ಕನಿಷ್ಠ ಶೇ.90ರಷ್ಟು ಸಾಧನೆ ಮಾಡಬೇಕು ಎಂದು ಡಿಸಿ ಅಧಿಕಾರಿಗಳಿಗೆ ಗಡುವು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಎಲ್., ತಹಶೀಲ್ದಾರ್ ಆರ್.ಶಂಕರ, ಉಪ ವಿಭಾಗಾಧಿಕಾರಿಗಳು ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರರು, ಕೃಷಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಬರ ನಿರ್ವಹಣೆಗೆ ಹೋಬಳಿವಾರು ನೇಮಕಗೊಂಡ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರ ಹಣ ನೀಡಲು ಸಿದ್ಧವಿದೆ
ಈಗಾಗಲೇ ಕಂದಾಯ ಸಚಿವರು ಹಾಗೂ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ನಡೆಸಿ ಬರ ಪರಿಹಾರ ಹಣ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ಪರಿಹಾರ ಫ್ರೂಟ್ ತಂತ್ರಾಂಶದಲ್ಲಿ ಪೂರ್ಣ ಪ್ರಮಾಣದ ದತ್ತಾಂಶ ದಾಖಲಿಸಿಲ್ಲ. ಅಂಥವರು ಪರಿಹಾರದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದ್ದಾರೆ. ಕಾರಣ ಯಾವ ರೈತರ ಬೆಳೆ ಮಾಹಿತಿಯೂ ಕೈಬಿಡಬಾರಬಾರದು. ಯಾರಿಗೂ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ರೈತರು ನಿಖರವಾದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಡಿಸಿ ತಿಳಿಸಿದ್ದಾರೆ.