

ಹಾವೇರಿ: ಬಾಲ್ಯ ವಿವಾಹ ತಡೆಗೆ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ. ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಹಚ್ಚಿ ವಾಪಸ್ ಶಾಲೆಗೆ ಕರೆತನ್ನಿ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಸಮನ್ವಯ ಹಾಗೂ ಪರಿಶೀಲನಾ ಸಭೆ, ಕೌಟಿಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಂದ ಅರಿವು ಮೂಡಿಸಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರು ಕಾರ್ಯಕ್ರಮಗಳ ಆಯೋಜನೆಗೆ ಕ್ರಮವಹಿಸಬೇಕು ಜತೆಗೆ ಕೆಳಹಂತದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಬೇಕು ಎಂದು ಸೂಚಿಸಿದರು.
ಅಂಗನವಾಡಿಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜಮೀನು ಗುರುತಿಸಿ ಮಾಹಿತಿ ಸಲ್ಲಿಸಿದರೆ ಅಂಗನವಾಡಿಗಳ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ, ಸ್ವಾಧಾರ ಗೃಹ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ, ಸಖಿ ಒನ್ ಸ್ಟಾಪ್ ಸೆಂಟರ್, ಜಿಲ್ಲಾ ಮಟ್ಟದ ಸ್ವತಂತ್ರ ವಿಶೇಷ ಕಾರ್ಯಪಡೆ ಸಮಿತಿ, ಮಾನವ ಅಕ್ರಮ ಸಾಗಾಣಿಕೆ ಜಿಲ್ಲಾ ಮಟ್ಟದ ಸಮಿತಿ, ಫೋಷಣ ಅಭಿಯಾನ, ಉಜ್ವಲ ಯೋಜನೆ, ಮೆಟ್ರಿಕ್ ನಂತರ ಬಾಲಕಿಯರ ನಿಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನೆ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಮಾತನಾಡಿ, ಜಿಲ್ಲೆಯಲ್ಲಿ ಜನವರಿ-2022 ರಿಂದ ಮೇ-2023ರವರೆಗೆ 60 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಅಪೌಷ್ಠಿಕ ಮಕ್ಕಳನ್ನು ಎನ್.ಆರ್.ಸಿ.ಗೆ ದಾಖಲಿಸಿ ಪೌಷ್ಠಿಕ ಆಹಾರ ನೀಡುವ ಜತೆಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ 24/7 ಎಲ್ಲ ಅಗತ್ಯ ಸೇವೆಗಳು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಆಪ್ತ ಸಮಾಲೋಚನೆ, ಕಾನೂನು ನೆರವು, ವೈದ್ಯಕೀಯ ನೆರವು, ಪೊಲೀಸ್ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸೆ ಡಾ.ಪಿ.ಆರ್.ಹಾವನೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜಯಶ್ರೀ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಗಳು ಉಪಸ್ಥಿತರಿದ್ದರು.