

ಹಾವೇರಿ: ಜಿಲ್ಲೆಯಲ್ಲಿ ಎಲ್ಲ ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆ್ಯಪ್ ಬಳಸಿ ನಿಯಮಾನುಸಾರ ಮತ್ತು ಮಾರ್ಗಸೂಚಿಗಳ ಪ್ರಕಾರ ನಿಗದಿತ ಅವಧಿಯೊಳಗೆ ಯಾವುದೇ ನ್ಯೂನ್ಯತೆಗಳಿಲ್ಲದಂತೆ ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಮುಂಗಾರು ಋತುವಿನ ಬೆಳೆ ಕಟಾವು ಪ್ರಯೋಗಗಳ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ 2023-24ನೇ ಸಾಲಿನ ಮುಂಗಾರು ಋತುವಿಗೆ ‘ರಿಲಯನ್ಸ್ ಜನರಲ್ ಇನ್ಸೂರನ್ಸ್ ಕಂಪನಿ’ ಬೆಳೆ ವಿಮಾ ಅನುಷ್ಠಾನ ಏಜೆನ್ಸಿಯಾಗಿರುತ್ತದೆ. ಆಯಾ ಇಲಾಖೆಗೆ ಹಂಚಿಕೆ ಮಾಡಿದ ಪ್ರಯೋಗಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಅಧಿಕಾರಿಗಳೇ ಜವಾಬ್ದಾರರಾಗಿದ್ದಾರೆ. ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವ ಮೂಲ ಕಾರ್ಯಕರ್ತರಿಗೆ ಮತ್ತು ಮೇಲ್ವಿಚಾರಕರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಆಯಾ ತಾಲೂಕುಗಳಲ್ಲಿ ಜು.20ರಿಂದ ತರಬೇತಿ ನೀಡಲಾಗುತ್ತಿದೆ. ಈ ಬೆಳೆ ಕಟಾವು ಕಾರ್ಯ ಅತ್ಯಂತ ಮಹತ್ವದ ಕಾರ್ಯವಾಗಿದೆ. ಇದನ್ನು ವಿವಿಧ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆ ಕಂಡು ಹಿಡಿಯಲು, ಮೇವಿನ ಪ್ರಮಾಣ ಅಂದಾಜಿಸಲು, ರೈತರಿಗೆ ಬೆಳೆವಿಮೆ ಯೋಜನೆ ಪರಿಹಾರ ಇತ್ಯರ್ಥಪಡಿಸಲು ಉಪಯೋಗಿಸಲಾಗುತ್ತಿದೆ. ಕಾರಣ ಎಲ್ಲ ಅಧಿಕಾರಿ-ಸಿಬ್ಬಂದಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಎಂ.ಭುಜಂಗನವರ ಮಾತನಾಡಿ, ಈವರೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹಾವೇರಿ ಜಿಲ್ಲೆಗೆ ಹೋಬಳಿ ಮಟ್ಟಕ್ಕೆ 25 ಬೆಳೆಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ನಾಲ್ಕು ಬೆಳೆಗಳನ್ನು ಅಧಿಸೂಚಿಸಲಾಗಿದೆ. ಅದರಂತೆ ಪ್ರತಿ ಹೋಬಳಿ ಮಟ್ಟದ ಬೆಳೆಗಳಿಗೆ 10 ಪ್ರಯೋಗಗಳನ್ನು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಭತ್ತ, ಮಕ್ಕೆಜೋಳ ಬೆಳೆಗಳಿಗೆ ನಾಲ್ಕು ಪ್ರಯೋಗಗಳನ್ನು ಹಾಗೂ ನೆಲಗಡಲೆ(ಶೇಂಗಾ) ಬೆಳೆಗೆ ಎಂಟು ಪ್ರಯೋಗಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಗೆ ಒಟ್ಟು 3,488 ಪ್ರಯೋಗಗಳು ಯೋಜಿತವಾಗಿರುತ್ತವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ, ಪ್ರಭಾರ ಉಪ ವಿಭಾಗಾಧಿಕಾರಿ ನಾಗರಾಜ, ಕೃಷಿ ಅಧಿಕಾರಿಗಳು, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.