

ಹಾವೇರಿ: ಕಾರ್ಖಾನೆಗಳ ವಿದ್ಯುತ್, ಅಗ್ನಿ, ರಾಸಾಯನಿಕ ಅವಘಡ ಸೇರಿದಂತೆ ಪ್ರಾಕೃತಿಕ ವಿಪತ್ತು ಸಂದರ್ಭದಲ್ಲಿ ಉಂಟಾಗುವ ಬಿಕ್ಕುಟ್ಟಗಳಿಗೆ ತ್ವರಿತ ಸ್ಪಂದನೆಯ ನಿಟ್ಟಿನಲ್ಲಿ ಕ್ಷಿಪ್ರ ಮಾಹಿತಿ ರವಾನೆ ಹಾಗೂ ಸ್ಪಂದನೆಗೆ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಏಪ್ರಿಲ್‌ನಲ್ಲಿ ಕುಮಾರಪಟ್ಟಣಂ ಗ್ರಾಸಿಂನಲ್ಲಿ ಜರುಗಿದ ಅಗ್ನಿಅವಘಡ ಕಾರಣಗಳ ಕುರಿತಂತೆ ತಾಂತ್ರಿಕ ತಜ್ಞರ ವಿಶ್ಲೇಷಣಾತ್ಮಕ ವರದಿಯ ಮಾಹಿತಿ ಪಡೆದುಕೊಂಡ ಅವರು, ಸಿಡಿಲಿನಂತಹ ಪ್ರಾಕೃತಿಕ ವಿಕೋಪ ಮಾಪನ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಸುರಕ್ಷಾ ಸಾಮಗ್ರಿಗಳನ್ನು ತಜ್ಞರ ಸಲಹೆಯಂತೆ ಕಾರ್ಖಾನೆಯಲ್ಲಿ ಹೆಚ್ಚುವರಿಯಾಗಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಗ್ನಿ ಅವಘಡದ ಸಂದರ್ಭದಲ್ಲಿ ವಿಪತ್ತು ತುರ್ತು ಸ್ಪಂದನೆ ಹಾಗೂ ಪರಿಹಾರ ಕ್ರಮಗಳು, ಅಗ್ನಿ ಶಾಮಕ, ಪೊಲೀಸ್, ಆರೋಗ್ಯ, ಸಾರಿಗೆ ಇಲಾಖೆ ಹಾಗೂ ಗ್ರಾಸೀಂ ಆಡಳಿತ ಮಂಡಳಿ ಕೈಗೊಂಡ ತುರ್ತು ಸ್ಪಂದನೆಯ ಮಾಹಿತಿ ಪಡೆದರು. ಪರಿಸರ ಇಲಾಖೆ, ಕೈಗಾರಿಕಾ ಇಲಾಖೆ, ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖಾ ತಜ್ಞರ ಮಾಹಿತಿಯನ್ನು ಪಡೆದುಕೊಂಡರು. ಅಗ್ನಿ ಅವಘಡಕ್ಕೆ ಲೈಟ್ನಿಂಗ್, ವಿದ್ಯುತ್ ನ್ಯೂನ್ಯತೆ ಒಳಗೊಂಡಂತೆ ಯಾವುದಾದರೂ ನಿರ್ಧಿಷ್ಟ ಕಾರಣಗಳ ಕುರಿತಂತೆ ತಾಂತ್ರಿಕ ತಜ್ಞರಿಂದ ಪುನರ್ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬಾಯ್ಲರ್ ಮತ್ತು ಕಾರ್ಖಾನೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಚವ್ಹಾಣ ಅಗ್ನಿ ಅವಘಡದ ವಿವರಣೆ ನೀಡಿದರು. ಬಳಿಕ ಕಾರ್ಖಾನೆ ವತಿಯಿಂದ ಹೆಚ್ಚಿನ ಸುರಕ್ಷಾ ಸಾಮಗ್ರಿಗಳ ಅಳಡಿಕೆ ಶಿಫಾರಸ್ಸುಗಳ ಕುರಿತು ವಿವರಣಾತ್ಮಕ ವರದಿ ನೀಡಿದರು.
ಸಭೆಯಲ್ಲಿ ಗ್ರಾಸಿಂ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧಿಕಾರಿ ಎಸ್.ಬದರಿ ಮಾತನಾಡಿ, ಕಾರ್ಖಾನೆಯಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಗ್ನಿ ಅವಘಡದ ನಂತರ ವೈರಿಂಗ್, ಅಗ್ನಿನಿರೋಧಕ ಪೈಪ್‌ಲೈನ್‌ಗಳ ಬದಲಾಯಿಸಿ ಅಳವಡಿಸಿರುವ ಕುರಿತಂತೆ ವಿವರಿಸಿದರು.
ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ, ಪರಿಸರ ಅಧಿಕಾರಿ ಸುಧಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ಸಿಪಿಐ ಸುರೇಶ ಸಗರಿ, ಗ್ರಾಸೀಂನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.