

ಹಾವೇರಿ: ಡಾ.ಬಾಬು ಜಗಜೀವನರಾಂ ಚರ್ಮ ಪಾದುಕೆ ಕುಟೀರಕ್ಕಾಗಿ ಫಲಾನುಭವಿಗಳು ಬೇಡಿಕೆ ಸಲ್ಲಿಸಿರುವ ಸ್ಥಳಗಳಲ್ಲಿ ಜಾಗದ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು-ಕೊರತೆಗಳ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫಲಾನುಭವಿಗಳಿಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಪಾದುಕೆ ಕುಟೀರ ಆರಂಭಿಸಲು ಸ್ಥಳ ಗುರುತಿಸಿ, ಫಲಾನುಭವಿಗಳ ಇಚ್ಛಿಸಿದ ಸ್ಥಳದಲ್ಲಿ ಮಳಿಗೆ ಸ್ಥಾಪನೆಗೆ ಜಾಗದ ತಕರಾರು ಉಂಟಾದರೆ ಪರ್ಯಾಯ ಜಾಗೆ ಗುರುತಿಸಲು ಕ್ರಮವಹಿಸಲು ಸೂಚಿಸಿದರು.
ಸ್ವಾವಲಂಬಿ ಮಾರಾಟ ಮಳಿಗೆ ಯೋಜನೆ, ಪಾದುಕೆ ಕುಟೀರ ಯೋಜನೆ, ನೇರ ಸಾಲ ಯೋಜನೆ, ಡಾ.ಬಾಬು ಜಗಜೀವನ ರಾಂ ಚರ್ಮಕಾರರ ವಸತಿ ಕಾರ್ಯಾಗಾರ ನಿರ್ಮಾಣ ಯೋಜನೆ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.
ನಗರದಲ್ಲಿ ಚರ್ಮ ಕುಲಶಲಕರ್ಮಿಗಳ ತರಬೇತಿಗೆ, ವಸ್ತುಗಳ ತಯಾರಿಕೆಗೆ ಮಾರಾಟಕ್ಕೆ ಸೂಕ್ತ ಕಟ್ಟಡ ಒದಗಿಸುವಂತೆ ನಾಮ ನಿರ್ದೇಶಿತ ಸದಸ್ಯರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿ, ಜನವರಿ 2023ರಿಂದ ನವೆಂಬರ್ ಅಂತ್ಯದವರೆಗೆ 51 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಸಂತ್ರಸ್ಥರಿಗೆ 59.62 ಲಕ್ಷ ರೂ. ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದೌರ್ಜನ್ಯ ನಿಯಂತ್ರಣ ಸಮಿತಿ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಹಾಗೂ ಮ್ಯಾನ್ಯುಯಲ್ ಸ್ಕಾ ್ಯವೆಂಜರ್ ಹಾಗೂ ಇನ್ ಸ್ಯಾನಿಟರಿ ಲ್ಯಾಟ್ರಿನ್ ಮತ್ತು ಸಫಾಯಿ ಕರ್ಮಚಾರಿಗಳ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದುಕೊರತೆಗಳನ್ನು ಆಲಿಸಿದರು. ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ಭೂಮಿ ಒದಗಿಸುವುದು, ವಸತಿ ರಹಿತ ಪೌರಕಾರ್ಮಿಕರಿಗೆ ವಸತಿ ಹಾಗೂ ನಿವೇಶನ ಒದಗಿಸಲು ಕ್ರಮವಹಿಸಲು ಡಿಸಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ, ಸಮಿತಿಗಳ ಅಧಿಕಾರೇತರ ಸದಸ್ಯರಾದ ರಮೇಶ ಆನವಟ್ಟಿ, ಸಿದ್ದಲಿಂಗಪ್ಪ, ಹೊನ್ನಪ್ಪ ಗಾಳೆಮ್ಮನವರ, ಮುತ್ತುರಾಜ ಮಾದರ, ಸುಭಾಸ ಬೆಂಗಳೂರು, ಸುನೀಲ ಬೆಟಗೇರಿ, ಮಾರುತಿ ಹಂಜಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.