ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ ಅವಧಿ ವಿಸ್ತರಣೆ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

Published on

ಹಾವೇರಿ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಹಮ್ಮಿಕೊಂಡಿರುವ ಸಮೀಕ್ಷೆ ಕಾರ್ಯವನ್ನು ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇ 5ರಿಂದ ಮೇ 25ರವರೆಗೆ ಮೊದಲ ಹಂತದ ಗಣತಿ ಜರುಗಲಿದ್ದು, ಈ ಅವಧಿಯಲ್ಲಿ ನೇಮಕಗೊಂಡ ಗಣತಿದಾರರು ತಮಗೆ ವಹಿಸಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಸಮುದಾಯಗಳ ಮನೆ ಮನೆಗೆ ತೆರಳಿ ಗಣತಿ ಕಾರ್ಯಕೈಗೊಳ್ಳುವರು. ಮನೆ-ಮನೆ ಗಣತಿಯಲ್ಲಿ ಬಾಕಿ ಉಳಿದವರಿಗಾಗಿ ಎರಡನೇ ಹಂತದಲ್ಲಿ ಮೇ 26ರಿಂದ ಮೇ 28ರವರೆಗೆ ಮತಗಟ್ಟೆ ವ್ಯಾಪ್ತಿಯಲ್ಲಿ ಗುರುತಿಸಿರುವ ವಿಶೇಷ ಶಿಬಿರಗಳಿಗೆ ಪರಿಶಿಷ್ಟ ಜಾತಿ ಸಮುದಾಯದವರು ತೆರಳಿ ಗಣಿತಿದಾರರಿಗೆ ಮಾಹಿತಿ ನೀಡಬೇಕು.

ಮೇ 19ರಿಂದ ಮೇ 28ರವರೆಗೆ ಮೂರನೇ ಹಂತದ ಗಣತಿ ಜರುಗಲಿದ್ದು, ಈ ಅವಧಿಯಲ್ಲಿ ಮನೆ ಮನೆ ಸಮೀಕ್ಷೆ ಹಾಗೂ ವಿಶೇಷ ಶಿಬಿರದಲ್ಲಿ ಜಾತಿಯ ಬಗ್ಗೆ ಘೋಷಣೆ ಮಾಡಿಕೊಳ್ಳದೇ ಇರುವವರು ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು (ಸ್ವಯಂ ಘೋಷಣೆಗೆ ಆಧಾರ್ ನಂಬರ್ ಹಾಗೂ ಜಾತಿ ಪ್ರಪತ್ರದ ಆರ್.ಡಿ. ನಂಬರ್ ಕಡ್ಡಾಯವಾಗಿರುತ್ತದೆ).

ಗಣತಿ ಸಮಯದಲ್ಲಿ ಸಾರ್ವಜನಿಕರು ಗಣತಿದಾರರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ (ರೇಷನ್ ಕಾರ್ಡ್) ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕು. ಪರಿಶಿಷ್ಟ ಜಾತಿಯ ಒಳ ಪಂಗಡದ ಕುರಿತು ಸ್ಪಷ್ಟವಾಗಿ ಗಣತಿದಾರರಿಗೆ ತಿಳಿಸಬೇಕು. ಈವರೆಗೆ ಆಧಾರ್ ಕಾರ್ಡ್ ಹೊಂದದೇ ಇರುವರು ಗಣತಿ ಕಾರ್ಯ ಮುಗಿಯುವ ಒಳಗಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಂತೆ ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net