

ಹಾವೇರಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮೊದಲ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಸೆ.25ರಂದು ಬೆಳಗ್ಗೆ 11 ಗಂಟೆಗೆ ದೇವಗಿರಿಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸೆ.25ರಂದು ಚಾಲನೆ ನೀಡಲಿದ್ದಾರೆ ಎಂದರು.
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸದ್ಯ ಯಾವುದೇ ನೀರಿನ ಸಮಸ್ಯೆ ಇಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬೋರ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಒಂದು ವೇಳೆ ಸರ್ಕಾರಿ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಅವುಗಳಿಂದ ನೀರಿನ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳಡಿ ಕಳೆದ ಒಂದುವರೆ ತಿಂಗಳಲ್ಲಿ ನದಿಯಿಂದ ನೀರು ಡಂಪ್ ಮಾಡಲಾಗಿದೆ. ನದಿ ನೀರಿನ ಪ್ರಮಾಣ ನೋಡಿಕೊಂಡು ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಗಾಂಧಿ ಭವನ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಉದ್ಘಾಟನೆಗೆ ಶೀಘ್ರವಾಗಿ ದಿನಾಂಕ ನಿಗದಿಪಡಿಸಲಾಗುವುದು. ಜಿಲ್ಲಾ ವಿಜ್ಞಾನ ಭವನ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಹಾಗೂ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.
ಕಬ್ಬಿನ ದರ: ಸಕ್ಕರೆ ಇಲಾಖೆಯಿಂದ ಕಬ್ಬಿಣ ದರ ನಿಗದಿಪಡಿಸಿದ್ದು, ಕನಿಷ್ಠ ದರ ನೀಡಬೇಕಾಗುತ್ತದೆ. ಹಾಗಾಗಿ, ಜಿಲ್ಲೆಯ ಎರಡು ಕಂಪನಿಗಳಿಗೆ ಕಬ್ಬಿನ ದರ ನಿಗದಿಯ ಆದೇಶ ಪಾಲನೆಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಸ್ಥಳದಲ್ಲೇ ಪರಿಹಾರ
ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲಾ ಹಂತದಲ್ಲಿ ಪರಿಹರಿಸಬಹುದಾದ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗುವುದು. ಮುಂದಿನ ಹಂತದ ಅರ್ಜಿಗಳ ದಾಖಲೆ ಪರಿಶೀಲಿಸಲಾಗುವುದು. ಅರ್ಜಿಗಳನ್ನು ಐಪಿಜಿಆರ್‌ಎಸ್ ಆನ್‌ಲೈನ್ ಸಿಸ್ಟಂನಲ್ಲಿ ಅಪ್‌ಲೋಡ್ ಮಾಡುವುದರಿಂದ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಡಿಸಿ ತಿಳಿಸಿದರು.
ನೀವೂ ಅರ್ಜಿ ಸಲ್ಲಿಸಬಹುದು
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಪ್ರವೇಶ ದ್ವಾರದಲ್ಲಿ ಅರ್ಜಿ ಸ್ವೀಕಾರಕ್ಕೆ ಕೌಂಟರ್‌ಗಳನ್ನು ತೆರೆಯಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಅರ್ಜಿಯ ಎರಡು ಪ್ರತಿಗಳೊಂದಿಗೆ ಬೆಳಗ್ಗೆ 9.30ಕ್ಕೆ ಆಗಮಿಸಿ ಅರ್ಜಿ ಸಲ್ಲಿಸಬೇಕು. ಒಂದು ಅರ್ಜಿ ಪ್ರತಿ ಕಚೇರಿಗೆ ಹಾಗೂ ಒಂದು ಪ್ರತಿ ಸ್ವೀಕೃತಿ ನೀಡಲಾಗುವುದು. ಪ್ರತಿ ಅರ್ಜಿಗಳನ್ನು ಐಪಿಆರ್‌ಜಿಎಸ್ ಪೋರ್ಟ್‌ಲ್‌ನಲ್ಲಿ ನೋಂದಾಯಿಸಿಕೊಂಡು, ನೋಂದಾಯಿತ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಲಾಗುವುದು. ಸಂಖ್ಯೆ ನೀಡಿದ ಅರ್ಜಿಯನ್ನು ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಬಹುದಾಗಿದೆ. ಸಂಜೆ 5 ಗಂಟೆವರೆಗೆ ಅರ್ಜಿ ಸ್ವೀಕರಿಸಲಾಗುವುದು. ಸಚಿವರು ಬೆಳಗ್ಗೆ 11ರಿಂದ ಜನತಾ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿ ಡಿಸಿ ವಿವರಿಸಿದರು.
ರೈತರಲ್ಲಿ ಮನವಿ
ಸಾರ್ವಜನಿಕರ ತೊಂದರೆಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನತಾ ದರ್ಶನ ಆಯೋಜಿಸಲಾಗಿದೆ. ಜಿಲ್ಲೆಯ ಉಳಿದ ತಾಲೂಕುಗಳ ಬರ ಘೋಷಣೆಗೆ ರೈತರ ಪರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳೆ ವಿಮೆ ಮದ್ಯಂತರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಆದೇಶ ಬರಲಿದೆ. ಈ ಕುರಿತು ರೈತರ ಸಂಘಗಳಿಗೆ ಮಾಹಿತಿ ನೀಡಲಾಗಿದೆ. ಸಭೆಯಲ್ಲಿ ರೈತರು ಪ್ರತಿಭಟನೆ ಮಾಡಬಾರದು ಎಂದು ಡಿಸಿ ಮನವಿ ಮಾಡಿದರು.