ಹಾವೇರಿ: ಜಿಲ್ಲೆಯಲ್ಲಿ ಅತಿಯಾದ ಶಾಖ ಹಾಗೂ ತರಂಗದಿಂದ ಉಂಟಾಗಬಹುದಾದ ಜನರ ಆರೋಗ್ಯ ಸಮಸ್ಯೆಗಳ ಸೂಕ್ತ ನಿರ್ವಹಣೆಗೆ ಜಿಲ್ಲೆಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಪಾಘಾತ ನಿರ್ವಹಣಾ ಕೊಠಡಿ (ಹೀಟ್ ಸ್ಟ್ರೋಕ್ ಮ್ಯಾನೇಜ್‌ಮೆಂಟ್ ರೂಮ್) ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆಯ ಅತಿಯಾದ ಶಾಖ ಹಾಗೂ ಶಾಖ ತರಂಗದಿಂದ ಸಾರ್ವಜನಿಕರಿಗೆ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಸೂಕ್ತ ನಿರ್ವಹಣೆಯ ಮೂಲಕ ಅಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ಐದು ಬೆಡ್‌ಗಳ ಕೊಠಡಿಗಳನ್ನು ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ಬೆಡ್‌ಗಳ ಕೊಠಡಿಗಳನ್ನು ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಂಕಿ ನಂದಿಸುವ ಉಪಕರಣಗಳ ಲಭ್ಯತೆ ಹಾಗೂ ಕಾರ್ಯಶೀಲತೆ, ಇಲೆಕ್ಟ್ರಿಕಲ್ ಲೋಡ್‌ನ ಆಡಿನ್ ನಡೆಸುವುದು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಮಾನ್ಯತೆ (ಎನ್‌ಒಸಿ) ಹೊಂದುವುದು ಅಗತ್ಯವಾಗಿದೆ. ಇದಲ್ಲದೇ ಆರೋಗ್ಯ ಸಂಸ್ಥೆಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಟಗ್ಟಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಡಿಸಿ ಸೂಚನೆ ನೀಡಿದ್ದಾರೆ.