ಹೊಸರಿತ್ತಿಯಲ್ಲಿ ಮಧ್ಯರಾತ್ರಿ ಧ್ವಜಾರೋಹಣ

16 HVR 4
Published on

ಹೊಸರಿತ್ತಿ (ಹಾವೇರಿ): ಇಲ್ಲಿನ ಹುತಾತ್ಮ ಮಹಾದೇವ ಮೈಲಾರ ಯುವಕ ಸಂಘದ ವತಿಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಗೆ ಆಯೋಜಿಸಿದ್ದ 78ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಾಂತೇಶ ದಾನಮ್ಮನವರ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ, ಹೊಸರಿತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವು. ಸ್ವಾತಂತ್ರ್ಯ ಸೇನಾನಿ ಮೈಲಾರ ಮಹದೇವಪ್ಪನವರ ನೇತೃತ್ವದಲ್ಲಿ ನಡೆದ ಹೋರಾಟ ಅವಿಸ್ಮರಣೀಯವಾದದ್ದು, ಇವರ ಜತೆಗೆ ವೀರಯ್ಯ ಹಿರೇಮಠ, ತಿರುಕಪ್ಪ ಮಡಿವಾಳರ, ಇನ್ನು ಮುಂತಾದವರು ಕೈ ಜೋಡಿಸಿದ್ದರು ಎಂದು ಸ್ಮರಿಸಿದರು.
ಈ ಭಾಗದಲ್ಲಿ ಮೈಲಾರ ಮಹದೇವಪ್ಪನವರು ಹೋರಾಟದ ಕಿಚ್ಚು ಹಚ್ಚಿದ್ದರು. ಕೊರಡೂರಿನ ಗಾಂಧಿ ಆಶ್ರಮ ಇವರಿಗೆ ಆಶ್ರಯ ತಾಣವಾಗಿತ್ತು. ಇವರೊಂದಿಗೆ ಗುದ್ಲೆಪ್ಪ ಹಳ್ಳಿಕೇರಿ ಮತ್ತು ಚೆನ್ನಮ್ಮ ಹಳ್ಳಿಕೇರಿ, ಇನ್ನೂ ಮುಂತಾದವರು ಸ್ವಾತಂತ್ರೃಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈ ಭಾಗದ ಡಾ.ಚಿತ್ತರಂಜನ ಕಲಕೋಟಿಯವರು 60 ವರ್ಷಕ್ಕೂ ಅಧಿಕ ಉಚಿತ ವೈದ್ಯಕೀಯ ವೃತ್ತಿ ನಡೆಸಿದ್ದರು ಎಂದರು.
ಸಾನ್ನಿಧ್ಯ ವಹಿಸಿದ್ದ ಹೊಸರಿತ್ತಿಯ ಗುದ್ದಲೀ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು.
ಇದಕ್ಕೂ ಮೊದಲು ಹೊಸರಿತ್ತಿ ಗ್ರಾಮದ ಬಸ್ ನಿಲ್ದಾಣದಿಂದ ರಾಷ್ಟ್ರಭಕ್ತಿ ಗೀತೆಗಳೊಂದಿಗೆ ಹುತಾತ್ಮ ಮೈಲಾರ ಮಹದೇವಪ್ಪ, ಈರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ ಕುಟುಂಬದ ಸದಸ್ಯರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರೋಟದಲ್ಲಿ ಮೆರವಣಿಗೆ ಮುಖಾಂತರ ವೀರಭದ್ರೇಶ್ವರ ದೇವಸ್ಥಾನದವರೆಗೆ ಕರೆತರಲಾಯಿತು.
ಪ್ರಾಸ್ತಾವಿಕವಾಗಿ ಕೆ.ಸಿ.ಕೋರಿ ಹಾಗೂ ಸಿದ್ದರಾಜ ಕಲಕೋಟಿ ಮಾತನಾಡಿದರು. ಪ್ರಮುಖರಾದ ವಿ.ಎನ್.ತಿಪ್ಪನಗೌಡ, ಸಾಹಿತಿ ಸತೀಶ ಕುಲಕರ್ಣಿ, ಡಾ.ಶ್ವೇತಾ ದಾನಮ್ಮನವರ, ಗವಿಸಿದ್ದಪ್ಪ ದ್ಯಾಮಣ್ಣನವರ, ಐ.ಜಿ.ಕೋರಿ, ಗಿರೀಶ ಅಂಕಲಕೋಟಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net