

ಹಾವೇರಿ: ಗ್ರಾಮ ಒನ್ ಯೋಜನೆಯು ಜನವರಿ 2022ರಂದು ಪ್ರಾರಂಭಗೊಂಡು ಇಂದಿಗೆ ಮೂರು ವರ್ಷಗಳನ್ನು ಪೂರೈಸಿದ್ದು ನಾಗರಿಕ ಸೇವಾ ವಿತರಣೆಯಲ್ಲಿ ಹಾಗೂ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸುವುದರಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದೆ. 80 ಇಲಾಖೆಗಳಿಂದ 874 ಸೇವೆಗಳನ್ನು ನೀಡುತ್ತಿರುವ ಗ್ರಾಮ ಒನ್ ಮೂರು ವರ್ಷದ ಅವಧಿಯಲ್ಲಿ ಒಟ್ಟು 22,58,501 ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಜಿಲ್ಲಾಧಿಕಾರಿಯವರ ಕಾರ್ಯಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಮ ಒನ್ ಯೋಜನೆಯ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐಪಿಪಿಬಿ (ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್) ಸೇವೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಒನ್ ಕೇಂದ್ರಗಳು ಸಾರ್ವಜನಿಕರಿಗೆ ಅತ್ಯಂತ ಸ್ನೇಹಮಹಿಯಾಗಿದ್ದು, ಗ್ರಾಮೀಣ ಭಾಗದ ಕಟ್ಟ ಕಡೆಯ ನಾಗರಿಕರಿಗೂ ಕೂಡ ಸರಕಾರದ ಸೇವೆಗಳನ್ನು ಸ್ಥಳೀಯವಾಗಿ ಒದಗಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತಿವೆ. ಇದರಿದ ಸಾರ್ವಜನಿಕರ ಸಮಯ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ಕಾಲಮಿತಿಯೊಳಗೆ ಸೇವೆಗಳನ್ನು ಪಡೆಯಬಹುದಾಗಿದೆ. 2022-23ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ಸತತವಾಗಿ 8 ತಿಂಗಳ ಕಾಲ ನಾಗರಿಕ ಸೇವೆಗಳನ್ನು ಒದಗಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವುದು ಗಮನರ್ಹವಾಗಿದೆ ಎಂದರು.
ಗ್ರಾಮ ಒನ್ ಕೇಂದ್ರದಲ್ಲಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಸೇವೆಗಳನ್ನು ಕೂಡ ಪ್ರಾರಂಭಿಸಲಾಗಿದೆ. ಇದು ಸಾರ್ವಜನಿಕರಿಗೆ ತಮ್ಮ ದೈನಂದಿನ ನಗದು ವ್ಯವಹಾರಗಳಿಗೆ ಸಹಕಾರಿ ಆಗಿಲಿದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯ ಮೂಲಕ ಸಾರ್ವಜನಿಕರು ಸ್ಥಳೀಯವಾಗಿ ತಮ್ಮ ಆಧಾರ್ ಬೇಸ್ ಅಕೌಂಟ್ ತೆರೆದು ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಬಹುದು. ಇಂಡಿಯನ್ ಪೋಸ್ಟ್ ಪೇಮೆಂಟ್ ಸರ್ವಿಸ್ ಅಲ್ಲಿ ಸಾರ್ವಜನಿಕರಿಗೆ ಆಧಾರ್ ಆಧಾರಿತ ನಗುದು ವಹಿವಾಟುಗಳಾದ ಗೃಹಲಕ್ಷ್ಮೀ ಯೋಜನೆ, ಪಿಎಂ ಕಿಸಾನ್, ಅನ್ನಭಾಗ್ಯ, ನರೇಗಾ, ಬೆಳೆವಿಮೆ, ಯುವನಿಧಿ, ವಿದ್ಯಾರ್ಥಿ ವೇತನ ಹೀಗೆ ಅನೇಕ ಸೇವೆಗಳಿಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಸಂದಾಯವಾಗುತ್ತಿದೆ ಎಂದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್, ಇಡಿಸಿಎಸ್ ಯೋಜನಾ ನಿರ್ದೇಶಕ ಮದನ ಮೋಹನ, ಇಡಿಸಿಎಸ್ ಉಪ ನಿರ್ದೇಶಕ ಮಹಾವೀರ, ಐಪಿಪಿಬಿ ಎ.ಜಿ.ಎಂ ದಿವಾಕರ ಎನ್.ಆರ್., ಐಪಿಪಿಬಿ ಮುಖ್ಯ ವ್ಯವಸ್ಥಾಪಕ ಜಗದೀಶ ಎಸ್. ಚಿಕ್ಕನರಗುಂದ, ಐಪಿಪಿಬಿ ಹಿರಿಯ ವ್ಯವಸ್ಥಾಪಕಿ ಶಿಲ್ಪಾ ಎಸ್., ಗ್ರಾಮ ಒನ್ ಇಡಿಸಿಎಸ್ ಗೀರೀಶ ಎಂ.ಎಂ., ಐಪಿಪಿಬಿ ಹಿರಿಯ ವ್ಯವಸ್ಥಾಪಕ ಶ್ಯಾಮ ಪ್ರಸಾದ ಆರ್, ಗ್ರಾಮ ಒನ್ ಯೋಜನಾ ವ್ಯವಸ್ಥಾಪಕ ಅರುಣ ಕಾಳಪ್ಪನವರ, ಇತರರು ಉಪಸ್ಥಿತರಿದ್ದರು.