ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಳಿಂದ ತೆರವಾಗಿರುವ ನಾಲ್ಕು ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳ ಆರು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಈ ಕುರಿತು ಗುರುವಾರ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಸಲು ಮೇ 14 ಕೊನೆಯ ದಿನವಾಗಿದೆ. ಮೇ 15 ರಂದು ನಾಮಪತ್ರಗಳ ಪರಿಶೀಲನೆ, ಮೇ 17ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ, ಮತದಾನ ಅವಶ್ಯವಿದ್ದಲ್ಲಿ ಮೇ 25ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜರುಗಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಮೇ 27ರಂದು ನಡೆಸಲಾಗುವುದು. ಮತಗಳ ಎಣಿಕೆ ಕಾರ್ಯ ಮೇ 28ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ ಎಂದು ಡಿಸಿ ತಿಳಿಸಿದ್ದಾರೆ.
ಯಾವ ಊರಲ್ಲಿ ನಡೆಯುತ್ತೆ ಎಲೆಕ್ಷನ್ ?
ರಟ್ಟಿಹಳ್ಳಿ ತಾಲೂಕಿನ ಚಿಕ್ಕಯಡಚಿ ಗ್ರಾಮ ಪಂಚಾಯಿತಿಯ ಕ್ಯಾತನಕೇರಿ ಕ್ಷೇತ್ರ (ಅನುಸೂಚಿತ ಜಾತಿ ಮಹಿಳೆ), ಹಿರೇಕೆರೂರ ತಾಲೂಕಿನ ತಾವರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ಕ್ಷೇತ್ರ (ಅನುಸೂಚಿತ ಜಾತಿ ಮಹಿಳೆ) ಹಾಗೂ ಕೋಡ ಗ್ರಾಪಂ ಕೋಡ-1 ಕ್ಷೇತ್ರ (ಹಿಂದುಳಿದ ವರ್ಗಅ), ಸವಣೂರ ತಾಲೂಕು ಕಾರಡಗಿ ಗ್ರಾಪಂನ ಕಾರಡಗಿ-3 ಕ್ಷೇತ್ರ (ಸಾಮಾನ್ಯ ಮಹಿಳೆ) ಹಾಗೂ ಮಂತ್ರೋಡಿ ಗ್ರಾಪಂನ ಮಂತ್ರೋಡಿ-1 ಕ್ಷೇತ್ರ (ಸಾಮಾನ್ಯ) ಹಾಗೂ ಹಾನಗಲ್ಲ ತಾಲೂಕು ಚಿಕ್ಕಾಂಶಿ ಹೊಸೂರ ಗ್ರಾಪಂನ ಕ್ಯಾಸನೂರ ಕ್ಷೇತ್ರ (ಅನುಸೂಚಿತ ಜಾತಿ ಮಹಿಳೆ)ದ ತಲಾ ಒಂದು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಲಿದೆ.