

ಹಾವೇರಿ: ಮಹಿಳಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಪರಿಹಾರ ಒದಗಿಸುವ ನಿಟ್ಟನಲ್ಲಿ ಮಹಿಳಾ ನೌಕರರ ಸಂಘ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆಬರಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷೆ ರಮಾ ಆರ್. ಹಾಗೂ ಪ್ರಧಾನ ಕಾರ್ಯದರ್ಶಿ ಶೈಲಜಾ ಸಿ.ವಿ. ಮಾತನಾಡಿ, ಮಹಿಳೆಯರಿಗೆ ಎಲ್ಲ ಕಡೆ ಸಮಾನ ಸ್ಥಾನಮಾನ ಸಿಗುವಂತಾಗಬೇಕು. ರಾಜ್ಯ ಸರ್ಕಾರಿ ನೌಕರರ ಮಹಿಳೆಯರ ಸಂಘ ಪುರುಷ ಸಂಘದ ವಿರೋಧಿಯಲ್ಲ. ಮಹಿಳಾ ಹಾಗೂ ಪುರುಷ ಸಂಘಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ, ಎರಡು ಸಂಘಗಳು ಸಮನ್ವಯದಿಂದ ಹಾಗೂ ಪರಸ್ಪರ ಸಹಕಾರದಿಂದ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ವಕೀಲರಾದ ರೆಹನಾ ಚನ್ನಪಟ್ಟಣ ವಿವಿಧ ಕಾನೂನುಗಳ ಕುರಿತು ಮಾಹಿತಿ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಇತರರು ಉಪಸ್ಥಿತರಿದ್ದರು. ವೀಣಾ ಎನ್. ಸ್ವಾಗತಿಸಿದರು. ಭಾಗ್ಯ ವಾಲ್ಮೀಕಿ ನಿರೂಪಿಸಿದರು. ಸವಿತಾ ಕಲಕೇರಿ ವಂದಿಸಿದರು.
ನೂತನ ಪದಾಧಿಕಾರಿಗಳ ಪದಗ್ರಹಣ
ಸಂಘದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಘಗಳ ಪದಾಧಿಕಾರಿಗಳ ಪದಗ್ರಹಣ ಜರುಗಿತು. ಜಿಲ್ಲಾ ಸಂಘದ ಅಧ್ಯಕ್ಷರಾಗಿ ಅಕ್ಕಮಹಾದೇವಿ ಕಾಕೋಳ, ಗೌರವ ಅಧ್ಯಕ್ಷರಾಗಿ ವಿಜಯಮ್ಮ ಎಸ್. ಪಾಟೀಲ, ಉಪಾಧ್ಯಕ್ಷರಾಗಿ ಮಂಜುಳಾ ಎಂ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಭಾಗ್ಯ ಎಂ.ಕೆ., ಖಜಾಂಚಿಯಾಗಿ ದಾಕ್ಷಾಯಣಿ ವಾಲ್ಮೀಕಿ ಪದಗ್ರಹಣ ಮಾಡಿದರು.
ಜಂಟಿ ಕಾರ್ಯದರ್ಶಿಯಾಗಿ ಸರೋಜಾ ಎಸ್.ಪಾಟೀಲ, ಡಾ.ರೇಖಾ ದೊಡ್ಡಗೌಡ್ರ, ವೀಣಾ ಎನ್., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಮ್ಮ ಬಾರ್ಕಿ, ನಂದಾ ಹೂಗಾರ ಹಾಗೂ ಶಾಹಿನಾ ಬೇಗಂ, ಕ್ರೀಡಾ ಕಾರ್ಯದರ್ಶಿಗಳಾಗಿ ಹೇಮಲತಾ ಸಿ.ಪೂಜಾರ, ಸವಿತಾ ಕಲಕೇರಿ, ನಾಗರತ್ನ ದೇಶಪಾಂಡೆ, ಕಾನೂನು ಸಲಹೆಗಾರರಾಗಿ ಕವಿತಾ ಕಿತ್ತೂರ, ಸಂಘಟಕರಾಗಿ ತೇಜಶ್ವಿನಿ ಅರ್ಕಾಚಾರಿ, ಸುಧಾ ಮಳಗಾವಿ ಹಾಗೂ ಶೋಭಾ ಕೋರಿ ಪದಗ್ರಹಣ ಮಾಡಿದರು.