ಎರಡನೇ ದಿನ ಒಂಭತ್ತು ನಾಮಪತ್ರ ಸಲ್ಲಿಕೆ; ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ

Published on

ಹಾವೇರಿ: ಹಾವೇರಿ- ಗದಗ ಲೋಕಸಭಾ ಕ್ಷೇತ್ರದಿಂದ ಎರಡನೇ ದಿನವಾದ ಸೋಮವಾರ ಏಳು ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ ಎಂಟು ಅಭ್ಯರ್ಥಿಗಳಿಂದ ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಯವರ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಭ್ಯರ್ಥಿಯಾಗಿ ಜಿ.ಜಿ.ಆನಂದಸ್ವಾಮಿ ಗಡ್ಡದೇವರಮಠ (ಒಂದು), ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಸವರಾಜ ಸೋಮಪ್ಪ ಬೊಮ್ಮಾಯಿ (ಎರಡು), ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿಯಾಗಿ ಸಚಿನಕುಮಾರ ಕರ್ಚೆಕಣ್ಣವರ್ (ಒಂದು), ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿಯಾಗಿ ಗಂಗಾಧರ ಸೋಮಣ್ಣ ಬಡಿಗೇರ (ಎರಡು), ಸೋಸಿಯಾಲಿಸ್ಟ್ ಪಾರ್ಟಿ (ಇಂಡಿಯಾ)ಅಭ್ಯರ್ಥಿಯಾಗಿ ಖಾಜಾಮೋಹಿದ್ದೀನ್ ಗುಡಗೇರಿ (ಒಂದು), ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಅಭ್ಯರ್ಥಿಯಾಗಿ ತನು ಸಿ. ಯಾದವ್ (ಒಂದು) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಗುರಪ್ಪ ಇಮ್ರಾಪೂರ (ಒಂದು) ನಾಮಪತ್ರ ಸಲ್ಲಿಸಿದ್ದಾರೆ ಎಂದು ಡಿಸಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net