

ಹಾವೇರಿ: ಡಾ.ಬಾಬು ಜಗಜೀವನರಾಂ ಅವರು ಬಡವರು, ಧೀನದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾಗೂ ಸಮಾಜದ ಸಮಾನತೆಗಾಗಿ ಹೋರಾಡಿದ ಧೀಮಂತ ನಾಯಕರು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಬಣ್ಣಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಪರಿಶಿಷ್ಟ ಜಾತಿಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕ ಡಾ.ಬಾಬು ಜಗಜೀವನರಾಂ ಅವರು ಶೋಷಿತರ ಆಶಾಕಿರಣವಾಗಿದ್ದಾರೆ ಎಂದು ಹೇಳಿದರು.
ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ, ಸಚಿವರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ರಾಜ್ಯದ, ರಾಷ್ಟ್ರದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಆಹಾರ ಕೊರತೆ ಇದ್ದಾಗ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿ ಸಮರ್ಥವಾಗಿ ಎದುರಿಸಿ, ಹಸಿರುಕ್ರಾಂತಿಯ ಹರಿಕಾರ ಎಂದೇ ಖ್ಯಾತಿಯಾದರು ಹಾಗೂ ರಕ್ಷಣಾ ಸಚಿವರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಾಲ್ ಮಾತನಾಡಿ, ಡಾ.ಬಾಬು ಜಗಜೀವನರಾಂ ಸಮಾಜದ ಪರಿವರ್ತನೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರು ತೋರಿದ ದಾರಿಯಲ್ಲಿಯೇ ನಾವೆಲ್ಲರೂ ಸಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಲ್ ನಾಗರಾಜ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಕೆ.ಎಂ ಮಂಜಾನಾಯ್ಕ, ತಹಸೀಲ್ದಾರ್ ಶರಣಮ್ಮ ಕೆ., ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.