ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ; ಕರೊನಾ ಮುಂಜಾಗ್ರತೆ ಸಭೆಯಲ್ಲಿ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

26 HVR 6
Published on

ಹಾವೇರಿ: ರಾಜ್ಯದಲ್ಲಿ ವ್ಯಾಪಕ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ಮುಂಜಾಗ್ರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತುರ್ತು ಆರೋಗ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳ ಹತೋಟಿಗೆ ತರಲು ಅಗತ್ಯ ವೈದ್ಯಕೀಯ ವ್ಯವಸ್ಥೆಯನ್ನು ಈಗಿನಿಂದಲೇ ಮಾಡಿಕೊಳ್ಳಿ. ಕಲುಷಿತ ವಾತಾವರಣದಿಂದ ಜನರಿಗೆ ಕೆಮ್ಮು, ಜ್ವರ, ಶೀತದಂತ ಕಾಯಿಲೆಗಳು ಬರುತ್ತವೆ. ಇವು ಕೋವಿಡ್ ಪ್ರಾಥಮಿಕ ಲಕ್ಷಣಗಳಾಗಿದ್ದು, ಇವುಗಳ ನಿವಾರಣೆಗೆ ಔಷಧಗಳ ಸಂಗ್ರಹಣೆ ಅಗತ್ಯವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದರು.

ವೈದ್ಯರು ಯಾವುದನ್ನೂ ನಿರ್ಲಕ್ಷಿಸದೇ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಮಾಸ್ಕ್, ಗ್ಲೌಸ್, ವೆಂಟಿಲೇಟರ್, ಪಿಎಸ್‌ಎ ಪ್ಲಾಂಟ್ಸ್, ಆಕ್ಸಿಜನ್ ಟ್ಯಾಂಕ್, ಐಸೋಲೇಷನ್ ಸೆಂಟರ್ ಮೊದಲಾದವುಗಳನ್ನು ಪರಿಶೀಲಿಸಿ ಪೂರ್ವ ತಯಾರಿ ಮಾಡಿಟ್ಟುಕೊಳ್ಳಿ. ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಿದರೆ ಮುಂದೆ ಆಗಬಹುದಾದ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ತಡೆಗೆ ತೆಗೆದುಕೊಂಡ ಅಗತ್ಯ ಪೂರ್ವ ತಯಾರಿ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ಎಲ್ ನಾಗರಾಜ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ಪಿ.ಆರ್ ಹಾವನೂರ, ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ಡಾ.ಸರಿತಾ, ತಾಲೂಕು ವೈದ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಬ್ಬಂದಿ ನಿಯೋಜನೆ:

ಜಿಲ್ಲಾಸ್ಪತ್ರೆ ಹಾಗೂ ಪ್ರತಿಯೊಂದು ತಾಲೂಕು ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಸರ್ಕಾರ ನೀಡಿರುವ ಎಲ್ಲ ಆಂಬುಲೆನ್ಸ್‌ಗಳಿಗೆ ಚಾಲಕರನ್ನು ನಿಯೋಜಿಸಬೇಕು. ಯಾವುದೇ ಆಂಬುಲೆನ್ಸ್‌ಗಳು ಖಾಲಿ ನಿಂತು ಹಾಳಾಗಬಾರದು. ಅವುಗಳು ರೋಗಿಗಳ ಉಪಯೋಗಕ್ಕೆ ಬಳಕೆಯಾಗಬೇಕು. ಹಾಗೆಯೇ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳನ್ನು ಪತ್ತೆಹಚ್ಚಲು ಆಶಾ ಕಾರ್ಯಕರ್ತೆಯರನ್ನು ಸಕ್ರಿಯವಾಗಿ ಬಳಸಿಕೊಳ್ಳಿ ಎಂದು ಡಿಸಿ ಸೂಚಿಸಿದರು.

ಸಾರ್ವಜನಿಕರಿಗೆ ಜಾಗೃತಿ:

ಜಿಲ್ಲೆಯ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಕುರಿತಾದ ಜಾಗೃತಿ ಅತಿ ಅವಶ್ಯಕವಾಗಿದೆ. ಆರೋಗ್ಯ ಜಾಥಾಗಳ ಮೂಲಕ ಸಾಂಕ್ರಾಮಿಕ ರೋಗಗಳ ಗಂಭೀರತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನ ಜಾಗೃತರಾದರೆ ಮಾತ್ರ ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದರು ಡಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net