ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಸಿವಿಜಿಲ್ (ಸಿವಿಜಿಲ್) ಆ್ಯಪ್ ಮೂಲಕ ವರದಿ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ಈ ತಂತ್ರಾಂಶವನ್ನು ಸಿದ್ದಪಡಿಸಿದೆ. ನಾಗರಿಕ ಸ್ನೇಹಿಯಾದ ಸಿವಿಜಲ್ ತಂತ್ರಾಂಶವನ್ನು ಮೊಬೈಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಈ ಮೂಲಕ ದೂರು ನೀಡಬಹುದು. ಚುನಾವಣೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳನ್ನು ತಕ್ಷಣ ವರದಿ ಮಾಡಲು ಹಾಗೂ ಅವುಗಳ ಮೇಲೆ ಕ್ರಮಕೈಗೊಳ್ಳಲು ಸಹಕಾರಿಯಾಗುವಂತೆ ಈ ತಂತ್ರಾಂಶವನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗ ರೂಪಿಸಿರುವ ಸಿವಿಜಿಲ್ (್ಚ್ಖಐಎಐಔ) ಆ್ಯಪ್ ವಿಜಿಲೆಂಟ್ ಸಿಟಿಜನ್ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಲ್ಲಿ ನಾಗರಿಕರು ವಹಿಸಬಹುದಾದ ಪೂರ್ವಭಾವಿ ಮತ್ತು ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಅಥವಾ ಆಯೋಗಕ್ಕೆ ದೂರು ದಾಖಲಿಸಲು ಅಥವಾ ಮಾಹಿತಿ ನೀಡಲು ಈ ಆ್ಯಪ್ ಅನುಕೂಲವಾಗಿದೆ.
ಮಾದರಿ ನೀತಿಸಂಹಿತೆ ಉಲ್ಲಂಘನೆಯ ಯಾವುದೇ ಅಂಶಗಳು ಗೊತ್ತಾದಲ್ಲಿ ಈ ಅಪ್ಲಿಕೇಶನ್ ಮೂಲಕ ನಾಗರಿಕರು ಕೆಲವೇ ನಿಮಿಷಗಳಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಬಹುದಾಗಿದೆ. ಕಚೇರಿಗೆ ಖುದ್ದಾಗಿ ಹೋಗಿ ದೂರು ಸಲ್ಲಿಸುವ ಅಗತ್ಯವಿರುವುದಿಲ್ಲ. ಯಾರೇ ಸಾರ್ವಜನಿಕರು ಸಿವಿಜಲ್ ಮೂಲಕ ದಾಖಲಿಸಿದ ದೂರು ಅಥವಾ ಮಾಹಿತಿಯು ಜಿಲ್ಲಾ ನಿಯಂತ್ರಣ ಕೊಠಡಿ, ಚುನಾವಣಾಧಿಕಾರಿ ಮತ್ತು ಕ್ಷೇತ್ರ ಘಟಕ (ಫ್ಲೈಯಿಂಗ್ ಸ್ಕ್ವಾಡ್‌ಗಳು)/ ಸ್ಥಿರ ಕಣ್ಗಾವಲು ತಂಡಗಳೊಂದಿಗೆ ಸಂಪರ್ಕಿಸುತ್ತದೆ. ಇದರಿಂದಾಗಿ ತ್ವರಿತ ಮತ್ತು ನಿಖರವಾದ ವರದಿ, ಕ್ರಮ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗೆ ಅತ್ಯಂತ ಉಪಯುಕ್ತವಾಗಿದೆ.
ಯಾವುದೇ ವೈಯಕ್ತಿಕ ದೂರುಗಳಿಗೆ ಅವಕಾಶ ಇರುವುದಿಲ್ಲ. ಜಿಲ್ಲೆಯಲ್ಲಿ ನೈತಿಕ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಸಿವಿಜಲ್ ಬಳಕೆ ಮಾಡಿಕೊಂಡು ದೂರು ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.