ಬೈಕ್ ಪ್ರಯಾಣಿಕರು ಮಕ್ಕಳ ಸುರಕ್ಷತೆಗೆ ಗಮನಹರಿಸಿ; ಡಿಸಿ ರಘುನಂದನ ಮೂರ್ತಿ ಸಲಹೆ

3 HVR 4
Published on

ಹಾವೇರಿ: ದ್ವಿಚಕ್ರ ವಾಹನ ಚಾಲಕರು ವಾಹನ ಚಲಾಯಿಸುವ ವೇಳೆ ಸುರಕ್ಷತೆಗೆ ಆದ್ಯತೆ ನೀಡಬೇಕು. ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು. ಹಿಂಬದಿಯಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಸುರಕ್ಷತಾ ಪರಿಕರಗಳನ್ನು ಬಳಸಬೇಕು. ತಮ್ಮ ಜತೆಗೆ ತಮ್ಮ ಕುಟುಂಬದ ಬಗ್ಗೆಯೂ ಕಾಳಜಿವಹಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಅಂಗವಾಗಿ ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ, ದ್ವಿಚಕ್ರ ವಾಹನದಲ್ಲಿ ಒಂಭತ್ತು ತಿಂಗಳಿನಿಂದ ನಾಲ್ಕು ವರ್ಷದ ಮಕ್ಕಳು ಪ್ರಯಾಣಿಸುವಾಗ ಸುರಕ್ಷತಾ ಕವಚ ಧರಿಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಹನ ಚಾಲನೆ ಮಾಡುವಾಗ ನಿಮ್ಮ ಕುಟುಂಬದವರ ಹಾಗೂ ವಾಹನ ಹಿಂಬದಿ ಸವಾರರ ಬಗ್ಗೆ ಕಾಳಜಿ ವಹಿಸಬೇಕು. ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತ ತಡೆಗೆ ಮುಂದಾಗಬೇಕು. ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಹೆಲ್ಮೆಟ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಹೆಲ್ಮೆಟ್ ಧರಿಸದವರಿಂದ ದಂಡ ವಸೂಲಿ ಮಾಡಲಾಗುತ್ತಿದೆ ಎಂದರು.
ಒಂಭತ್ತು ತಿಂಗಳಿನಿಂದ ನಾಲ್ಕು ವರ್ಷದ ಮಕ್ಕಳವರೆಗೆ ಬೈಕ್‌ನ ಹಿಂಬದಿಯಲ್ಲಿ ಕರೆದೊಯ್ಯುವಾಗ ಅಪಘಾತಗಳು ಹೆಚ್ಚಾಗಿ ಕಂಡುಬರುತ್ತದೆ. ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಕ್ಕಳ ಸುರಕ್ಷತಾ ಸರಂಜಾಮುಗಳನ್ನು ಆರಂಭದಲ್ಲಿ ಸ್ಥಳೀಯ ದ್ವಿಚಕ್ರವಾಹನ ವಿತರಕರ ನೆರವಿನಿಂದ ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಲ್ಮೆಟ್ ಜತೆಗೆ ಮಕ್ಕಳ ಸುರಕ್ಷತಾ ಸರಂಜಾಮುಗಳನ್ನು ಖರೀದಿಸಿ ಸುರಕ್ಷತಾ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ಉಪಯೋಗಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ 276 ಅಪಘಾತಗಳು ಸಂಭವಿಸಿವೆ. ಈ ವರ್ಷ ಅಪಘಾತಗಳ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, ಪ್ರಥಮ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ ಸುರಕ್ಷತೆ ಸರಂಜಾಮು ಬಿಡುಗಡೆ ಮಾಡಲಾಗುತ್ತಿದೆ. ವಾಹನ ಚಾಲನೆ ಸಮಯದಲ್ಲಿ ಮೊಬೈಲ್‌ನಲ್ಲಿ ಮಾತನಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ ಪವಾರ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಹಾಬಲೇಶಪ್ಪ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ, ರಮೇಶ ಆನವಟ್ಟಿ, ಇತರರು ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net