ಕೇಬಲ್, ಜಾಲತಾಣಗಳ ಜಾಹೀರಾತಿಗೆ ಅನುಮತಿ ಬೇಕು; ಡಿಸಿ ರಘುನಂದನ ಮೂರ್ತಿ ಸೂಚನೆ

18 HVR 10
Published on

ಹಾವೇರಿ: ಲೋಕಸಭಾ ಚುನಾವಣೆ ಅಂಗವಾಗಿ ಕೇಬಲ್ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಚುನಾವಣಾ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಹಾಗೂ ಮುದ್ರಣ ಸಾಮಗ್ರಿಗಳ ಮೇಲೆ ಪ್ರಕಾಶಕರ ಮತ್ತು ಮುದ್ರಕರ ಹೆಸರು, ಮುದ್ರಣ ಸಂಖ್ಯೆಗಳ ನಮೂದು ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಅಂಗವಾಗಿ ಮುದ್ರಣಾಲಯದ ಮಾಲೀಕರು ಹಾಗೂ ಲೋಕಲ್ ಕೇಬಲ್ ಟಿವಿ ಆಪರೇಟರ್‌ಗಳ ಸಭೆ ನಡೆಸಿದ ಅವರು, ಕೇಬಲ್ ಟಿವಿಗಳಲ್ಲಿ ಪ್ರಸಾರ ಮಾಡುವ ಚುನಾವಣಾ ಪ್ರಚಾರದ ಕಂಟೆಂಟ್ ವಿಡಿಯೋ ಅಥವಾ ಕಿರುಚಿತ್ರ ಪ್ರಸಾರಕ್ಕೆ ಮುನ್ನ ಜಾಹೀರಾತು ಮತ್ತು ವಿಡಿಯೋ ತುಣುಕುಗಳು ಹಾಗೂ ಅದರ ವೆಚ್ಚದ ವಿವರವನ್ನು ನಿಗದಿತ ನಮೂನೆಯೊಂದಿಗೆ ಸಮಿತಿಗೆ ಸಲ್ಲಿಸಿ ಪರಿಶೀಲನೆ ನಡೆಸಿ ಪ್ರಸಾರಕ್ಕೆ ಅನುಮತಿ ನೀಡಿದ ನಂತರವೇ ಪ್ರಕಟಿಸಬೇಕು ಎಂದು ಸೂಚಿಸಿದರು.
ಸುಗಮ ಹಾಗೂ ಪಾರದರ್ಶಕ ಚುನಾವಣೆಗೆ ಮುದ್ರಣ ಹಾಗೂ ಕೇಬಲ್ ವಾಹಿನಿಗಳ ಪ್ರತಿನಿಧಿಗಳ ಸಹಕಾರ ಅಗತ್ಯವಿದ್ದು, ನಿಯಮ ಪಾಲಿಸದ ಕೇಬಲ್ ಆಪರೇಟರ್ ಹಾಗೂ ಮುದ್ರಣ ಮಾಲೀಕರ ಮೇಲೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 127 ಎ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಪ್ರಚಾರ ಸಾಮಗ್ರಿಗಳ ಮುದ್ರಣ ಹಾಗೂ ಪ್ರಸಾರ ಕುರಿತಾಗಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಚುನಾವಣಾ ತರಬೇತಿದಾರ ಉಪನ್ಯಾಸಕ ಅರವಿಂದ ಐರಣಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಮುದ್ರಣಾಲಯಗಳ ಮಾಲೀಕರು, ಸ್ಥಳೀಯ ಕೇಬಲ್ ಆಪರೇಟರ್ ಹಾಗೂ ಮಾಲೀಕರಿಗೆ ವಿವರಿಸಿದರು.
ಮುದ್ರಣ ಮಾಲೀಕರ ಗಮನಕ್ಕೆ
ಚುನಾವಣಾ ಪ್ರಚಾರದ ಕರಪತ್ರಗಳು, ಬ್ಯಾನರ್, ಪೋಸ್ಟರ್‌ಗಳನ್ನು ಮುದ್ರಿಸುವ ಮುನ್ನ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕಡ್ಡಾಯವಾಗಿ ಮುದ್ರಣಕ್ಕೆ ಆದೇಶ ನೀಡಿದ ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ವ್ಯಕ್ತಿಗಳಿಂದ ಕಡ್ಡಾಯವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು. ಈ ಘೋಷಣೆಗೆ ಇಬ್ಬರ ಸಾಕ್ಷಿದಾರರ ರುಜು ಪಡೆದುಕೊಂಡ ನಂತರ ಮುದ್ರಣಾಲಯದ ಮಾಲೀಕರು ಕರಪತ್ರ, ಬ್ಯಾನರ್ ಒಳಗೊಂಡಂತೆ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಬೇಕು. ಮುದ್ರಣ ಸಾಮಗ್ರಿಗಳ ಮೇಲೆ ಕಡ್ಡಾಯವಾಗಿ ಮುದ್ರರಕರ ಹೆಸರು(ಪ್ರಿಂಟರ್), ವಿಳಾಸ, ದೂರವಾಣಿ ಸಂಖ್ಯೆ, ಪ್ರಕಾಶಕರ (ಪಬ್ಲಿಷರ್)ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಮುದ್ರಣ ಮಾಡಿದ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಮುದ್ರಣ ಮಾಡಿದ ಎರಡು ದಿನದೊಳಗಾಗಿ ಘೋಷಣಾಪತ್ರ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ವಿವರದ ಒಂದು ಪ್ರತಿಯೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಕಡ್ಡಾಯವಾಗಿ ಮಾಹಿತಿ ಸಲ್ಲಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net