ಆಧಾರ್ ಸಿಬ್ಬಂದಿ ಕುಂಟುನೆಪ ಹೇಳದೇ ಕೆಲಸ ಮಾಡಿ; ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ

30 HVR 8
Published on

ಹಾವೇರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಧಾರ್ ನೋಂದಣಿ ಕೇಂದ್ರಗಳ ಅಧಿಕಾರಿ, ಸಿಬ್ಬಂದಿ ಕುಂಟುನೆಪ ಹೇಳುವುದನ್ನು ಬಿಟ್ಟು ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಷ್ಟು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಷ್ಟು ಕೇಂದ್ರಗಳು ಸ್ಥಗಿತಗೊಂಡಿವೆ ಹಾಗೂ ಯಾವ ಯಾವ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ ಎಂಬುದನ್ನು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಧಾರ್ ಕೇಂದ್ರಗಳಲ್ಲಿ ಶಾಲಾ ವಿದ್ಯಾರ್ಥಿಗಳ ಹೆಸರು ತಿದ್ದುಪಡಿ ವಿಳಂಬವಾಗುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಆದ್ಯತೆ ಮೇಲೆ ಕೆಲಸ ಮಾಡಬೇಕು. ತಾಂತ್ರಿಕ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಬಗೆಹರಿಸಬೇಕು. ಆಧಾರ್ ನೋಂದಣಿ, ತಿದ್ದುಪಡಿ, ಮೊಬೈಲ್ ನಂಬರ್ ಬದಲಾವಣೆಗೆ ಬರುವ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು. ಅಲೆದಾಡಿಸಬಾರದು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಇತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 200 ಕೇಂದ್ರಗಳು

ಬ್ಯಾಡಗಿ ತಾಲೂಕಿನಲ್ಲಿ 25, ಹಾನಗಲ್ಲ-41, ಹಾವೇರಿ-35, ಹಿರೇಕೆರೂರ-13, ರಾಣೆಬೆನ್ನೂರ-33, ರಟ್ಟಿಹಳ್ಳಿ-16, ಸವಣೂರ-17 ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 20 ಸೇರಿ ಒಟ್ಟು 200 ಕೇಂದ್ರಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ತಾಲೂಕು ಪಂಚಾಯಿತಿ, ಅಂಚೆ ಕಚೇರಿ, ವಿವಿಧ ಬ್ಯಾಂಕ್‌ಗಳಲ್ಲಿ ಆಧಾರ್ ದಾಖಲೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಆಧಾರ್ ನೋಂದಣಿ ಕೇಂದ್ರದ ಮೇಲುಸ್ತುವಾರಿ ಅಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸೊನ್ನೆಯಿಂದ ಐದು ವರ್ಷದೊಳಗಿನ 81,719, ಐದರಿಂದ 18 ವರ್ಷದೊಳಗಿನ 3,78,268 ಹಾಗೂ 18 ವರ್ಷ ಮೇಲ್ಪಟ್ಟ 14,26,791 ಜನರು ಆಧಾರ್ ನೋಂದಣಿ ಮಾಡಿಸಿದ್ದಾರೆ. ಐದು ವರ್ಷ ಮೇಲ್ಪಟ್ಟ 80,301 ಮಕ್ಕಳ ಹಾಗೂ 15 ವರ್ಷ ಮೇಲ್ಪಟ್ಟ 57,815 ಮಕ್ಕಳು ಸೇರಿ 1,38,116 ಮಕ್ಕಳ ಬಯೋಮೆಟ್ರಿಕ್ ಬಾಕಿ ಇದೆ. ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net