ಜಲಾಗಾರ, ನೀರಿನ ಟ್ಯಾಂಕ್ ಸ್ವಚ್ಛತೆಗೆ ಕ್ರಮ; ಹಾವೇರಿ ನಗರಸಭೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ; ವಾರದೊಳಗೆ ಶುದ್ಧಗೊಳಿಸಲು ಸೂಚನೆ

Haveri 1
Published on

ಹಾವೇರಿ: ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾಗಾರಗಳು ಹಾಗೂ ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಮಾಡಲು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಹಾವೇರಿ ನಗರಸಭೆ ಕಚೇರಿಗೆ ಗುರುವಾರ ಸಂಜೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದ ಜಲಾಗಾರ ಸ್ವಚ್ಛತೆ ಕೈಗೊಳ್ಳಬೇಕು. ಮುನ್ಸಿಪಲ್ ಮೈದಾನದಲ್ಲಿರುವ ಮೇಲ್ಮಟ್ಟದ ಟ್ಯಾಂಕ್‌ಗಳ ಆವರಣ ಮತ್ತು ಟ್ಯಾಂಕ್ ಸ್ವಚ್ಛಗೊಳಿಸಬೇಕು. ಶಿಥಿಲಗೊಂಡಿರುವ ಹಳೇ ಟ್ಯಾಂಕ್ ಬಳಕೆ ಬಂದ್ ಮಾಡಿ. ವಾರದೊಳಗೆ ನಗರದ ಎಲ್ಲ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಎಂದು ತಾಕೀತು ಮಾಡಿದ್ದಾರೆ. ಸ್ವಚ್ಛತೆ ಕೈಗೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
‘ಜಲಾಗಾರ ಜನಾರೋಗ್ಯಕ್ಕೆ ಸಂಚಕಾರ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ರಿಯಾಲಿಟಿ ಚೆಕ್ ಮಾಡಿ ಆ.24ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಮುಂದಡಿ ಇಟ್ಟಿದೆ.
ಜಲಶುದ್ಧೀಕರಣ ನಿರ್ವಹಣೆಗೆ ದರಪಟ್ಟಿ ಆಹ್ವಾನ
ಹಾವೇರಿ: ಹಾವೇರಿ ನಗರಸಭೆಗೆ ನೀರು ಸರಬರಾಜು ಮಾಡುವ ಜಲಶುದ್ದೀಕರಣ ಘಟಕ ಮತ್ತು ಜಲ ಸಂಗ್ರಹಾಲಯಗಳನ್ನು ಸ್ವಚ್ಛಗೊಳಿಸುವ ಕಾಮಗಾರಿಯನ್ನು ನಿರ್ವಹಿಸಲು ದರಪಟ್ಟಿ (ಕೊಟೇಶನ್) ಕರೆಯಲಾಗಿದೆ.
ಆಸಕ್ತ ಗುತ್ತಿಗೆದಾರರು ತಮ್ಮ ದರವಾರುಗಳನ್ನು ಶೀಲ್ ಬಂದ್‌ಮಾಡಿ ಮೊಹರು ಲಕೋಟೆಗಳೊಂದಿಗೆ ಸೆ.2ರೊಳಗಾಗಿ ಕಚೇರಿ ಅವಧಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ, ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನಗರಸಭೆ ಪ್ರಕಟಣೆ ಹೊರಡಿಸಿದೆ.
ಶೀಘ್ರವೇ ಪೇವರ್ಸ್‌ ಅಳವಡಿಕೆ
‘ರಿಯಾಲಿಟಿ ಚೆಕ್’ ಮೂಲಕ ಜಲಾಗಾರ ಮತ್ತು ನೀರಿನ ಟ್ಯಾಂಕ್ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಕ್ಕೆ ‘ವಿಜಯವಾಣಿ’ ತಂಡಕ್ಕೆ ಧನ್ಯವಾದಗಳು. ಹಾವೇರಿ ಮುನ್ಸಿಪಲ್ ಮೈದಾನದ ನೀರಿನ ಟ್ಯಾಂಕ್‌ಗಳ ಆವರಣದಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶಿಥಿಲಗೊಂಡಿರುವ ಟ್ಯಾಂಕ್ ಬಳಸದಿರಲು ಹಾಗೂ ಶೀಘ್ರವೇ ಅದನ್ನು ನೆಲಸಮ ಮಾಡಲು ನಿರ್ಧರಿಸಲಾಗಿದೆ.
ಪಕ್ಕದ ಹೊಸ ಟ್ಯಾಂಕ್ ಕೆಳಗೆ ಕೊಳಚೆ ನೀರು ನಿಲ್ಲದಂತೆ ಪೇವರ್ಸ್‌ ಅಳವಡಿಸಲಾಗುವುದು. ಟ್ಯಾಂಕ್ ಸುತ್ತ ತಂತಿ ಬೇಲಿ ನಿರ್ಮಿಸಿ ಯಾರೂ ಸುಳಿಯದಂತೆ ಕ್ರಮ ಜರುಗಿಸಲಾಗುವುದು ಎಂದು ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಎಇಇ ನಾಗರಾಜ ರಾಯ್ಕರ ತಿಳಿಸಿದ್ದಾರೆ.

ಕೋಟ್:
ಜಲಾಗಾರಗಳು, ಓವರ್‌ಹೆಡ್ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ, ಒಡೆದ ಪೈಪ್‌ಲೈನ್‌ಗಳನ್ನು ದುರಸ್ತಿಗೊಳಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತ್ವರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಆದೇಶಿಸಿದ್ದೇನೆ.
ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net