ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ; ಬಾಲ್ಯ ವಿವಾಹ ತಡೆ ಪ್ರತಿಜ್ಞಾ ಸ್ವೀಕಾರ

17 HVR 4
Published on

ಹಾವೇರಿ: ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ನೇತೃತ್ವದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪ್ರತಿಜ್ಞಾ ವಿಧಿ ಭೋದಿಸಿದರು.
ನ್ಯಾಯಾಧೀಶ ಪುಟ್ಟರಾಜು ಅವರು ಮಾತನಾಡಿ, ಅನಧಿಕೃತವಾಗಿ ಮಕ್ಕಳನ್ನು ದತ್ತು ನೀಡುವುದು ಅಥವಾ ಪಡೆಯುವುದು ಕಾನೂನು ಬಾಹಿರವಾಗಿದೆ. ದತ್ತು ಸ್ವೀಕಾರ ಬಯಸುವ ಪಾಲಕರು ಅಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ. ದತ್ತು ಪಡೆಯುವ ದಂಪತಿ ಅಗತ್ಯ ದಾಖಲೆಗಳೊಂದಿಗೆ ಜಿಲ್ಲೆಯಲ್ಲಿರುವ ವಿಶೇಷ ದತ್ತು ಸ್ವೀಕಾರ ಕೇಂದ್ರವನ್ನು ಸಂಪರ್ಕಿಸಬುದು. ಅಥವಾ ಡಿಡಿಡಿ.್ಚಚ್ಟ.್ಞಜ್ಚಿ.ಜ್ಞಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಬಹುದು ಎಂದರು.
ಮಕ್ಕಳನ್ನು ಮಾರಾಟ ಮಾಡಿದರೆ ಹಾಗೂ ಮಕ್ಕಳನ್ನು ಕೊಳ್ಳುವವರಿಗೆ ಬಾಲ ನ್ಯಾಯ ಕಾಯ್ದೆ -2015 ಸೆಕ್ಷನ್ 81ರ ಅನ್ವಯ ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶವಿದೆ. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಮೂರು ವರ್ಷ ಕಡಿಮೆ ಇಲ್ಲದಂತೆ ಏಳು ವರ್ಷಗಳವರೆಗೆ ವಿಸ್ತರಣೆ ಮಾಡಬಹುದಾದ ಜೈಲು ಶಿಕ್ಷೆ ವಿಧಿಸಲಾಗುವುದು. ಮಕ್ಕಳನ್ನು ದತ್ತು ಪಡೆಯುವ ಅಪೇಕ್ಷೆ ಇದ್ದರೆ ಕಾನೂನು ಬದ್ಧವಾಗಿ ದತ್ತು ಪಡೆಯಬೇಕು. ಈ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪ್ರಕಟಿಸಿರುವ ದತ್ತು ಸ್ವೀಕಾರ ಹಾಗೂ ಮಕ್ಕಳ ಮಾರಾಟ ಅಪರಾಧ ಕುರಿತ ಜಾಗೃತಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ.ನಿಲೇಶ, ಡಾ.ಜಗದೀಶ, ಡಾ.ಪ್ರಭಾಕರ, ಕೆ.ಸಿ.ಅಕ್ಷತಾ, ಟಿಎಚ್‌ಒಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net