ಜಿಲ್ಲೆಯಾದ್ಯಂತ ದಸರಾ ಸಡಗರ; ಬರದ ನಡುವೆಯೂ ಸಾಂಪ್ರದಾಯಿಕ ಆಚರಣೆ; ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ

24 HVR 7 B
Published on

ಹಾವೇರಿ: ಯಾಲಕ್ಕಿ ನಗರಿ ಹಾವೇರಿ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ನಾಡಹಬ್ಬ ದಸರಾ ಸಡಗರ ಮನೆ ಮಾಡಿತ್ತು. ಬರದ ಛಾಯೆಯ ನಡುವೆಯೂ ರೈತ ಕುಟುಂಬದವರು ಸಾಂಪ್ರದಾಯಿಕ ಆಚರಣೆ ಮೂಲಕ ಹಬ್ಬ ಆಚರಿಸಿದರು. ಸೋಮವಾರ ಆಯುಧ ಪೂಜೆ ಮತ್ತು ಮಂಗಳವಾರ ವಿಜಯದಶಮಿ ಹಬ್ಬ ಆಚರಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅನ್ನದಾತ ಈ ವರ್ಷ ಸಂಕಷ್ಟದಲ್ಲಿದ್ದಾನೆ. ಈ ನಡುಯೆ ಜಿಲ್ಲೆಯ ಎಂಟೂ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ಅದ್ಧೂರಿ ಆಚರಣೆ ಕಂಡುಬರಲಿಲ್ಲವಾದರೂ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಯಿತು.
ಸೋಮವಾರ ಮನೆಯ ಆಯುಧಗಳು, ವಾಹನಗಳು, ಪುಸ್ತಕ, ಪೆನ್ನು, ಮತ್ತಿತರ ವಸ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ದೇವಿಗೆ ಹೋಳಿಗೆ, ಕಡಬು, ಕೋಸಂಬರಿ, ಮತ್ತಿತರ ಖಾದ್ಯ ನೈವೇದ್ಯ ಹಿಡಿಯಲಾಯಿತು. ಸಂಜೆ ಸ್ನೇಹಿತರು, ಬಂದುಗಳೆಲ್ಲ ಬನ್ನಿ ಮುಡಿಯುವ ಮೂಲಕ ಪರಸ್ಪರ ದಸರೆಯ ಶುಭಾಶಯ ವಿನಿಮಯ ಮಾಡಿಕೊಂಡರು. ‘ಬನ್ನಿ ತಗೊಂಡು ಬಂಗಾರದಂಗ ಇರೋಣ ರೀ..’ ಎಂದು ಶುಭ ಹಾರೈಸಿದರು.
ಕಂಗೊಳಿಸಿದ ನವ ದುರ್ಗೆಯರು
ಹಾವೇರಿಯ ರೈಲು ನಿಲ್ದಾಣದ ಎದುರಿನ ನವದುರ್ಗಾ ಮತ್ತು ಹಕ್ಕಲು ಮರಿಯಮ್ಮ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ 9 ದೇವಿಯರಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಹೂವಿನ ಅಲಂಕಾರದಲ್ಲಿ ನವದುರ್ಗೆಯರು ಕಂಗೊಳಿಸಿದರು. ಸಹಸ್ರಾರು ಭಕ್ತರು ದೇಗುಲಕ್ಕೆ ಆಗಮಿಸಿ, ದೇವಿಗೆ ಉಡಿ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net