

ಹಾವೇರಿ: ಡಾ.ಸಂಜಯಕುಮಾರ ಡಾಂಗೆ ತಮ್ಮ ಸತತ ಪ್ರಯತ್ನದಿಂದ ಆರೋಗ್ಯ ಸೇವೆಗಾಗಿ ಶ್ರಮಿಸುತ್ತಿದ್ದಾರೆ. ನರ್ಸಿಂಗ್, ಪ್ಯಾರಾ ಮೆಡಿಕಲ್ ಹಾಗೂ ಹೆಲ್ತ್ ಸೈನ್ಸ್ ಕ್ಷೇತ್ರದ ವೃದ್ಧಿಗೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ನರ್ಸಿಂಗ್ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಶಾಸಕ ರುದ್ರಪ್ಪ ಲಮಾಣಿ ಶ್ಲಾಘಿಸಿದರು.
ನಗರದ ಶ್ರೀ ಸಿದ್ದರಾಮೇಶ್ವರ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾಂಗೆ ಎಜುಕೇಶನ್ ಸೊಸೈಟಿಯ ಐದನೇ ವಾರ್ಷಿಕೋತ್ಸವ, 2025-26ನೇ ಸಾಲಿನ ದೀಪಧಾರಣೆ ಹಾಗೂ ಸಾಂಸ್ಕೃತಿಕ ಕಲಾ ವೈಭವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಏನೆಲ್ಲ ಸಾಧನೆ ಮಾಡಬಹುದು. ಅನಾರೋಗ್ಯದ ಸಂದರ್ಭದಲ್ಲಿ ತಾಯಿ ನಂತರ ಅತಿ ಕಾಳಜಿ ಮಾಡುವವರು ಶುಶ್ರೋಷಕರು. ಧಾರ್ಮಿಕ ತಳಹದಿಯ ಮೇಲೆ ವಿಶ್ವಾಸವಿಟ್ಟ ಡಾ.ಡಾಂಗೆಯವರು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾರ್ಥಕ ಸೇವೆ ಅನನ್ಯ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿದರು. ರವಿಕುಮಾರ ಟಿ, ರಬ್ಬಾನಿ ಹುಲಗೇರಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬೌದ್ಧ ಬಿಕ್ಕು ಕಮಲನಾಥ ಬಂಥೇಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ.ಮೈದೂರ, ಪ್ರಭುಗೌಡ ಬಿಷ್ಟನಗೌಡ್ರ, ಪರಶುರಾಮ ಅಡಕಿ, ಸಿ.ಬಿ.ಕುರವತ್ತಿಗೌಡ್ರ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಬಸವರಾಜ ಹೆಡಿಗೊಂಡ, ಶ್ರೀಧರ ದೊಡ್ಡಮನಿ, ಹನುಮಂತಗೌಡ ಗೊಲ್ಲರ, ಪ್ರಾಂಶುಪಾಲೆ ಸರಸ್ವತಿ ವೈ.ಎಚ್., ಇತರರು ಉಪಸ್ಥಿತರಿದ್ದರು.
ಕೋಟ್:
ಮೂರು ದಶಕಗಳಿಂದ ಚರ್ಮರೋಗ ತಜ್ಞನಾಗಿ ಸೇವೆ ಸಲ್ಲಿಸುತ್ತಿರುವೆ. ಈ ಭಾಗದಲ್ಲಿ ನುರಿತ ಶುಶ್ರೂಷಕರ ಕೊರತೆ ಇತ್ತು. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಡಾಂಗೆ ಎಜುಕೇಶನ್ ಸೊಸೈಟಿ ಮೂಲಕ ಶುಶ್ರೂಕರಿಗೆ ತರಬೇತಿ ನೀಡಲಾಗುತ್ತಿದೆ. ವೈದ್ಯರು, ಶುಶ್ರೂಕರ ಮೇಲೆ ಜನರಿಗೆ ವಿಶ್ವಾಸ ಇರಬೇಕು. ಅಂದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯ.
- ಡಾ.ಸಂಜಯಕುಮಾರ ಡಾಂಗೆ, ಚೇರ್ಮನ್, ಡಾಂಗೆ ಎಜುಕೇಶನ್ ಸೊಸೈಟಿ