ಸುಪ್ರೀಂ ತೀರ್ಪಿನಿಂದ ಅಸೃಷ್ಯರಿಗೆ ಪುನರ್ ಜನ್ಮ; ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ

DS MAlagi PC
Published on

ಹಾವೇರಿ: ಪರಿಶಿಷ್ಟ ಜಾತಿಯ ಮಾದಿಗ ಸಮಾಜದ ಜನಸಂಖ್ಯೆಗನುಗುಣವಾಗಿ ಸುಪ್ರೀಂಕೋರ್ಟ್ ಮೀಸಲಾತಿ ವರ್ಗೀಕರಣಕ್ಕೆ ನೀಡಿದ ತೀರ್ಪು ಐತಿಹಾಸಿಕವಾಗಿದ್ದು. ಈ ತೀರ್ಪು ಅಸ್ಪೃಶ್ಯ ಜನಾಂಗದವರಿಗೆ ಪುನರ್‌ಜನ್ಮ ನೀಡಿದಂತಾಗಿದೆ. ಆದಷ್ಟು ಬೇಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಪರಿಶಿಷ್ಟ ಜಾತಿ ಶೇ.15ರ ಮೀಸಲಾತಿಯಲ್ಲಿ 101 ಜಾತಿಗಳಲ್ಲಿ ಮೀಸಲು ಸವಲತ್ತಿನಿಂದ ಅಸ್ಪಶ್ಯರಲ್ಲಿಯೇ ಅಸ್ಪೃಶ್ಯರಾದ ಮಾದಿಗರು, ಸಮಗಾರ, ಡೋರ, ಮಚಗಾರ, ಡೊಕ್ಕಲಿಗರು ವಂಚಿತರಾಗಿದ್ದಾರೆ. ಎರಡು ದಶಕಗಳಿಂದ ವರ್ಗೀಕರಣ ಮೀಸಲಿಗಾಗಿ ಹೋರಾಟ ನಡೆಸುತ್ತ ಬಂದಿದ್ದರೂ ಸೌಲಭ್ಯ ಸಿಕ್ಕಿರಲಿಲ್ಲ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವಧಿಯಲ್ಲಿ ಎ.ಜೆ.ಸದಾಶಿವ ಆಯೋಗವನ್ನು ರಚಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಧರಣಿ, ಚಳವಳಿ ನಡೆಸಿದ್ದಾಗ ಸಮಾಜದವರ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅನುದಾನವನ್ನು ಬಿಡುಗಡೆ ಮಾಡಿದ್ದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಿಫಾರಸ್ಸು ಮಾಡದೇ ಅನ್ಯಾಯ ಮಾಡಿತ್ತು ಎಂದರು.
ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದ ಅನುಮೋದನೆ ಪಡೆದು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಈ ಮೂಲಕ ಶೋಷಿತ ಸಮುದಾಯಗಳಿಗೆ ಬೊಮ್ಮಾಯಿ ಸಾಮಾಜಿಕ ನ್ಯಾಯ ಕಲ್ಪಿಸಿದ್ದರು. ಇವರ ಶಿಫಾರಸ್ಸಿನ ಮೇರೆಗೆ ಸುಪ್ರೀಂಕೋರ್ಟ್ ಆಯೋಗದ ವರದಿಯನ್ನು ಜಾರಿಗೆ ತರಲು ಐತಿಹಾಸಿಕ ತೀರ್ಪು ನೀಡಿದ್ದು, ಇದು ರಾಜ್ಯದ ಅಸ್ಪೃಶ್ಯ ಜನಾಂಗದವರಿಗೆ ನೀಡಿದ ಪುನರ್ ಜನ್ಮವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡಚಪ್ಪ ಮಾಳಗಿ, ನಾಗರಾಜ, ಸುಭಾಸ ಬೆಂಗಳೂರ, ಸಂತೋಷ ಗುಡ್ಡಪ್ಪನವರ, ಮಂಜು ಮರೋಳ, ಆನಂದ ಬಡೆಪ್ಪನವರ, ಮಲ್ಲೇಶ ಕಡಕೋಳ, ಅಶೋಕ ಶಿಬಾರ, ಮಾಲತೇಶ ತಳಗೇರಿ, ಫಕ್ಕೀರೇಶ ಕುರಡೆಪ್ಪನವರ, ಕಿರಣಕುಮಾರ ತಳಗೇರಿ, ಹನುಮಂತಪ್ಪ ಹೌಂಸಿ ಇತರರಿದ್ದರು.
ಬೊಮ್ಮಾಯಿಗೆ ಶೀಘ್ರದಲ್ಲೇ ಸನ್ಮಾನ
ಆಯೋಗದ ವರದಿಯನ್ನು ಶಿಫಾರಸ್ಸು ಮಾಡಿದ್ದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಸಮಾಜದ ಮುಖಂಡರಿಗೆ ಶೀಘ್ರದಲ್ಲೇ ಹಾವೇರಿ, ಧಾರವಾಡ, ಗದಗ ಜಿಲ್ಲೆಯ ಸಮಾಜದ ವತಿಯಿಂದ ಅಭಿನಂದಿಸಲಾಗುವುದು ಎಂದು ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net