

ಹಾವೇರಿ: ಅಡಾಕ್ಸ್ ಯುನೈಟೆಡ್ ಕಿಂಗ್‌ಡಮ್ ವತಿಯಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 1,540 ಕಿ.ಮೀ. ಸೈಕಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹಾವೇರಿ ಸೈಕಲ್ ಕ್ಲಬ್ ಸದಸ್ಯ ತಿಮ್ಮೇಶಕುಮಾರ ಸಂಪಳ್ಳಿ ತೆರಳಲಿದ್ದಾರೆ.
ಆಗಸ್ಟ್ 3ರಿಂದ 8ರವರೆಗೆ ಈ ಸ್ಫರ್ಧೆ ನಡೆಯಲಿದೆ. ಜಗತ್ತಿನಾದ್ಯಂತ 2,400 ಜನ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಭಾರತದಿಂದ 186, ಕರ್ನಾಟಕದಿಂದ 48, ಉತ್ತರ ಕರ್ನಾಟಕದಿಂದ 6 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಹಾವೇರಿ ಸೈಕಲ್ ಕ್ಲಬ್ ವತಿಯಿಂದ ಮೊಟ್ಟಮೊದಲ ಬಾರಿಗೆ ತಿಮ್ಮೇಶಕುಮಾರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 128 ಗಂಟೆಯಲ್ಲಿ 1,540 ಕಿ.ಮೀ. ದೂರವನ್ನು ತಲುಪುವ ಸ್ಪರ್ಧೆ ಇದಾಗಿದೆ.
ಹಾವೇರಿ ಸೈಕಲ್ ಕ್ಲಬ್ ವತಿಯಿಂದ ಗುರುವಾರ ತಿಮ್ಮೇಶಕುಮಾರ ಅವರನ್ನು ಸನ್ಮಾನಿಸಿ, ಬಿಳ್ಕೊಡಲಾಯಿತು. ಈ ವೇಳೆ ಹಾವೇರಿ ಸೈಕಲ್ ಕ್ಲಬ್ ಅಧ್ಯಕ್ಷ ಪ್ರಶಾಂತ ದೊಡ್ಡಮನಿ ಮಾತನಾಡಿ, ನಮ್ಮ ಹಾವೇರಿ ಸೈಕಲ್ ಕ್ಲಬ್ ಸದಸ್ಯರು ಇಂತಹ ಸಾಧನೆ ಮಾಡುತ್ತಿರುವುದು ಖುಷಿಯ ಸಂಗತಿ. ಸೈಕಲ್ ಓಡಿಸುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರಾದ ಶ್ರವಣ ಪಂಡಿತ, ಅರವಿಂದ ಮೂಲಿಮನಿ, ಗುಹೇಶ್ವರ ಪಾಟೀಲ, ದಯಾನಂದ ಸೂರಗೊಂಡ, ಉಳವಪ್ಪ ಹಲಗಣ್ಣನವರ, ಎಂಆರ್‌ಎಂ ರಾವ್, ಜಯಪ್ರಕಾಶ, ರಾಜಣ್ಣ ಮನಮಂದಿರ, ಇತರರು ಉಪಸ್ಥಿತರಿದ್ದರು.
ಕೋಟ್:
126 ಘಂಟೆಯಲ್ಲಿ 1,540 ಕಿ.ಮೀ. ದೂರ ಕ್ರಮಿಸುವುದು ಸುಲಭದ ಮಾತಲ್ಲ. ಆದರೆ, ನಾನು ಇದಕ್ಕಾಗಿ ಒಂದು ವರ್ಷದಿಂದ ಸತತ ಪ್ರಯತ್ನ ಮಾಡಿ 100, 200, 300 ಹಾಗೂ 1,000 ಕಿ.ಮೀ.ವರೆಗೆ ಸೈಕಲ್ ಓಡಿಸುವ ಮೂಲಕ 1,500 ಕಿ.ಮೀ. ಸ್ಪರ್ಧೆಗೆ ಅಗತ್ಯ ತಯಾರಿ ನಡೆಸಿದ್ದೇನೆ. ಇಂಗ್ಲೆಂಡ್‌ನಲ್ಲಿ ಇಲ್ಲಿಗಿಂತ ವ್ಯತಿರಿಕ್ತ ವಾತಾವರಣ ಇರುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈಕ್ಲಿಂಗ್ ಮಾಡಿದ್ದೇನೆ. ಇದು ಸಹಕಾರಿಯಾಗಲಿದೆ.
- ತಿಮ್ಮೇಶಕುಮಾರ ಸಂಪಳ್ಳಿ, ಸೈಕ್ಲಿಸ್ಟ್