

ಕೇಶವಮೂರ್ತಿ ವಿ.ಬಿ. ಹಾವೇರಿ
ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿ ಕರೆ ಮಾಡಿ ಒಟಿಪಿ ಪಡೆದು ವಂಚಿಸುವುದು, ಲಿಂಕ್ ಕಳುಹಿಸಿ ವಂಚನೆ, ಅಧಿಕ ಲಾಭದ ಆಸೆ ತೋರಿಸಿ ವಂಚನೆ, ಡಿಜಿಟಲ್ ಅರೆಸ್ಟ್, ಸೇರಿದಂತೆ ನಾನಾ ಬಗೆಯಲ್ಲಿ ಸೈಬರ್ ಕಳ್ಳರು ವಂಚಿಸುತ್ತಿದ್ದಾರೆ.
ಕೇವಲ 17 ತಿಂಗಳಲ್ಲಿ ಜಿಲ್ಲೆಯ ಹಲವು ಜನರಿಗೆ ವಂಚಿಸಿ 8 ಕೋಟಿ ರೂ. ಲಪಟಾಯಿಸಿದ್ದಾರೆ. ಅಮಾಯಕ ವಿದ್ಯಾರ್ಥಿಗಳು, ಅನಕ್ಷರಸ್ಥರ ಜತೆಗೆ ಅಕ್ಷರಸ್ಥ ವೈದ್ಯರು, ಇಂಜಿನಿಯರ್ ಸೇರಿದಂತೆ ಹಲವರು ಸೈಬರ್ ವಂಚನೆಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಜಿಲ್ಲೆಯ ಸೈಬರ್ ಅಪರಾಧ, ಆರ್ಥಿಕ ಮತ್ತು ಮಾದಕ ದ್ರವ್ಯ ನಿಯಂತ್ರಣ (ಸೆನ್) ಪೊಲೀಸ್ ಠಾಣೆಯಲ್ಲಿ 2024ರಲ್ಲಿ ಒಟ್ಟು 72 ಸೈಬರ್ ಕ್ರೈಂ ಕೇಸ್‌ಗಳು ದಾಖಲಾಗಿವೆ. ಇದರಲ್ಲಿ 6.90 ಕೋಟಿ ರೂ. ವಂಚನೆಯಾಗಿದ್ದು, ಸೈಬರ್ ಠಾಣೆ ಪೊಲೀಸರು 1.85 ಕೋಟಿ ರಿಕವರಿ ಮಾಡಿ ಕೋರ್ಟ್ ಮೂಲಕ ಜನರಿಗೆ 92 ಲಕ್ಷ ವಾಪಸ್ ಕೊಟ್ಟಿದ್ದಾರೆ. 2025ರ ಜನವರಿಯಿಂದ ಈವರೆಗೆ 29 ಪ್ರಕರಣ ವರದಿಯಾಗಿದ್ದು, 1.08 ಕೋಟಿ ರೂ. ವಂಚನೆಯಾಗಿದೆ. 35.44 ಲಕ್ಷ ರೂ. ರಿಕವರಿಯಾಗಿದ್ದು, 24.44 ಲಕ್ಷ ವಾಪಸ್ ಕೊಡಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್, ಪೊಲೀಸ್, ಕಸ್ಟಮ್ಸ್, ಮತ್ತಿತರ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುವುದು, ಒಟಿಪಿ ಪಡೆದು, ಲಿಂಕ್ ಕಳುಹಿಸಿ ವಂಚಿಸುವುದು, ಡಿಜಿಟಲ್ ಅರೆಸ್ಟ್ ಮಾಡುವುದು, ಬೆತ್ತಲೆಯಾಗಿ ಫೋಟೋ, ವಿಡಿಯೋ ಕರೆ ಮಾಡಿ ಬೆದರಿಸುವುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಕೊಡುತ್ತೇವೆ ಎಂದು ಮೋಸ ಮಾಡುವುದು, ಫೇಸ್‌ಬುಕ್, ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿ, ಕೆವೈಸಿ, ಆಧಾರ್ ಜೋಡಣೆ, ಸರ್ಕಾರಿ ಯೋಜನೆ ಹೆಸರಲ್ಲಿ, ಬಹುಮಾನ ಬಂದಿದೆ ಎಂದು ವಂಚಿಸುವುದು ಸೇರಿ ನಾನಾನ ಬಗೆಯಲ್ಲಿ ವಂಚಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎನ್ನುತ್ತಾರೆ ಸೈಬರ್ ಕ್ರೈಂ ಠಾಣೆ ಪೊಲೀಸರು.
ವಿದೇಶಿ ವರನ ಹೆಸರಲ್ಲಿ 9 ಲಕ್ಷ ಗುಳುಂ
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ವೊಂದರ ಮೂಲಕ ತಾನು ವಿದೇಶದಲ್ಲಿ ಕೈತುಂಬ ಸಂಬಳ ಬರುವ ಹುದ್ದೆಯಲ್ಲಿದ್ದೇನೆ ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಜಿಲ್ಲೆಯ ಯುವತಿಯೊಬ್ಬಳನ್ನು ನಂಬಿಸಿ, ಉಡುಗೊರೆಯ ನೆಪದಲ್ಲಿ 9 ಲಕ್ಷ ರೂ. ವಂಚಿಸಿರುವ ಕುರಿತು ಹಾವೇರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾವೇರಿ ಮೂಲದ ಯುವತಿ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾಳೆ. ಆನ್‌ಲೈನ್‌ನ ಮ್ಯಾಟ್ರಿಮೋನಿ ವೆಬ್‌ಸೈಟ್‌ವೊಂದರಲ್ಲಿ ವರನ ಹುಡುಕಾಟಕ್ಕೆಂದು ಖಾತೆ ತೆರೆದಿದ್ದರು. ಸ್ವಿಡ್ಜರ್‌ಲ್ಯಾಂಡ್ ಪ್ರಜೆ ಎಂದು ಹೇಳಿ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ, ತನಗೆ ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸವಿರುವುದಾಗಿ ತಿಳಿಸಿದ್ದ. ಮದುವೆಯಾಗುವುದಾಗಿಯೂ ನಂಬಿಸಿ ಚಾಟಿಂಗ್ ಆರಂಭಿಸಿದ್ದರು.
ಕೆಲ ದಿನಗಳ ನಂತರ ಯುವತಿಗೆ ಫೋಟೊ ಸಮೇತ ಸಂದೇಶ ಕಳುಹಿಸಿದ್ದ ಆರೋಪಿ, ನಿನ್ನನ್ನು ನಾನು ತುಂಬಾ ಇಷ್ಟಪಡುತ್ತೇನೆ. ನಿನಗೆ ಬೆಲೆಬಾಳುವ ಚಿನ್ನಾಭರಣ ಇರುವ ಉಡುಗೊರೆ ಕಳುಹಿಸುತ್ತಿದ್ದೇನೆ. ಅದನ್ನು ಸ್ವೀಕರಿಸು ಎಂದಿದ್ದ. ಇದಾದ ಕೆಲದಿನಗಳ ನಂತರ ದೆಹಲಿಯ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಯುವತಿಗೆ ಕರೆ ಮಾಡಿದ್ದ ಆರೋಪಿಗಳು, ಸ್ವಿಟ್ಜರ್‌ಲ್ಯಾಂಡ್‌ನಿಂದ ಕೋರಿಯರ್ ಬಂದಿದೆ. ಅದರಲ್ಲಿ ಬೆಲೆಬಾಳುವ ವಸ್ತುಗಳಿವೆ. ಶುಲ್ಕ ಪಾವತಿ ಮಾಡಿದರೆ, ನಿಮ್ಮ ವಿಳಾಸಕ್ಕೆ ಕಳುಹಿಸಲಾಗುವುದು ಎಂದಿದ್ದರು. ಅದನ್ನೂ ನಂಬಿದ್ದ ಯುವತಿ, ಹಂತ ಹಂತವಾಗಿ 9 ಲಕ್ಷ ರೂ. ರವಾನಿಸಿದ್ದರು. ನಂತರ, ಯಾವುದೇ ಉಡುಗೊರೆ ಬಂದಿಲ್ಲ. ಆನ್‌ಲೈನ್ ವರನೂ ನಾಪತ್ತೆಯಾಗಿದ್ದಾನೆ. ಬಳಿಕ ಯುವತಿ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿವಾಹಿತೆಗೆ 4.95 ಲಕ್ಷ ಮೋಸ
ಇಂಗ್ಲೆಂಡ್ ಪ್ರಜೆಯ ನೆಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಅಪರಿಚಿತನೊಬ್ಬ ರಾಣೆಬೆನ್ನೂರ ತಾಲೂಕಿನ ವಿವಾಹಿತ ಮಹಿಳೆಯೊಬ್ಬರಿಗೆ ಸ್ನೇಹದ ನೆನಪಿಗಾಗಿ ಇಂಗ್ಲೆಂಡ್‌ನಿಂದ ಚಿನ್ನಾಭರಣ, ಇತರ ಉಡುಗೊರೆ ಕಳುಹಿಸುವುದಾಗಿ ನಂಬಿಸಿ 4.95 ಲಕ್ಷ ರೂ. ವಂಚಿಸಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿರುವ ಮಹಿಳೆಗೆ ಇಂಗ್ಲೆಂಡ್ ಪ್ರಜೆಯ ಹೆಸರಲ್ಲಿ ಅನಾಮಿಕನೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಸ್ವೀಕರಿಸಿದ್ದ ಮಹಿಳೆಯೊಂದಿಗೆ ಆತ ಸ್ನೇಹದ ನೆಪದಲ್ಲಿ ಚಾಟಿಂಗ್ ಆರಂಭಿಸಿದ್ದ. ಉಡುಗೊರೆ ಕಳುಹಿಸುವುದಾಗಿ ನಂಬಿಸಿ, ಫೋಟೋ ಕೂಡ ಕಳುಹಿಸಿದ್ದ.
ವಾರದ ನಂತರ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ವಂಚಕರು ಮಹಿಳೆಗೆ ಕರೆ ಮಾಡಿ ಉಡುಗೊರೆಯನ್ನು ನಿಮ್ಮ ವಿಳಾಸಕ್ಕೆ ತಲುಪಿಸುವ ಶುಲ್ಕ, ಇಂಗ್ಲೆಂಡ್ ದೇಶದ ಕರೆನ್ಸಿ ಬದಲಾವಣೆಯ ಶುಲ್ಕದ ನೆಪದಲ್ಲಿ 4.95 ಲಕ್ಷ ರೂ. ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಮಹಿಳೆಯ ಪುತ್ರಿ ಹಾವೇರಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಂಚಕರ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.
2024ರ ಅಂಕಿ- ಅಂಶ
ಸೈಬರ್ ಕ್ರೈಂ ಕೇಸ್- 72
ವಂಚನೆ ಮೌಲ್ಯ- 6.90 ಕೋಟಿ ರೂ.
ರಿಕವರಿ ಮಾಡಿದ್ದು- 1.85 ಕೋಟಿ ರೂ.
ವಾಪಸ್ ಕೊಟ್ಟಿದ್ದು- 92 ಲಕ್ಷ ರೂ.
2025ರ ಕೇಸ್‌ಗಳ ವಿವರ (ಜನವರಿಯಿಂದ ಜೂನ್ 14ರವರೆಗೆ)
ಸೈಬರ್ ಕ್ರೈಂ ಕೇಸ್- 29
ವಂಚನೆ ಮೌಲ್ಯ- 1.08 ಕೋಟಿ ರೂ.
ರಿಕವರಿ ಮಾಡಿದ್ದು- 35.44 ಲಕ್ಷ ರೂ.
ವಾಪಸ್ ಕೊಟ್ಟಿದ್ದು- 24.44 ಲಕ್ಷ ರೂ.
ಕೋಟ್:
ಸಾರ್ವಜನಿಕರು ಅಪರಿಚಿತರ ಮೊಬೈಲ್ ಕರೆ, ಸಂದೇಶ, ಮೇಲ್‌ಗಳಿಗೆ ಪ್ರತಿಕ್ರಿಯಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿವರ ಹಂಚಿಕೊಳ್ಳಬಾರದು. ಯಾರಿಗೂ ಒಟಿಪಿ ಹೇಳಬಾರದು. ಅಪರಿಚಿತರಿಂದ ಬಂದ ಲಿಂಕ್ ಒತ್ತಬಾರದು. ಸಂಶಯ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಬೇಕು. ಸೈಬರ್ ವಂಚನೆಯಾದಲ್ಲಿ ತಕ್ಷಣ ಸೈಬರ್ ಹೆಲ್ಪ್‌ಲೈನ್ 1930 ಅಥವಾ 112ಗೆ ಕರೆ ಮಾಡಬೇಕು.
- ಶಿವಶಂಕರ ಗಣಾಚಾರಿ, ಇನ್‌ಸ್ಪೆಕ್ಟರ್, ಸೈಬರ್ ಕ್ರೈಂ ಪೊಲೀಸ್ ಠಾಣೆ, ಹಾವೇರಿ