

ಹಾವೇರಿ: ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಸೈಬರ್ ಅಪರಾಧಗಳೂ ಅಷ್ಟೇ ವೇಗವಾಗಿ ನಡೆಯುತ್ತಿವೆ. ಸೈಬರ್ ವಂಚಕರು ಜನಸಾಮಾನ್ಯರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ಹಾಗಾಗಿ, ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಿರುವುದು ಮುಖ್ಯ ಎಂದು ಸೈಬರ್ ಕ್ರೈಂ ಅಡ್ಮಿನ್ ನಾಗರಾಜ ಹಾನಗಲ್ಲ ಹೇಳಿದರು.
ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾರ್ಕ್ ವೆಬ್ ಮೂಲಕ ಸೈಬರ್ ಕ್ರೈಂ ನಡೆಸುತ್ತಾರೆ. ಆದರೆ, ಇದು ಎಲ್ಲ ಸಮಯದಲ್ಲೂ ಅಲ್ಲ. ಅವರಲ್ಲಿ ಕೆಲವರು ಸಾಮಾಜಿಕ ಮಾಧ್ಯಮದಂತಹ ಸಾರ್ವಜನಿಕ ವೇದಿಕೆಗಳನ್ನು ಬಳಸುತ್ತಾರೆ. ಕೆಲವು ಉದಾಹರಣೆಗಳೆಂದರೆ ರ‌್ಯಾನ್‌ಸಮ್‌ವೇರ್ ದಾಳಿಗಳು, ಮಾಲ್‌ವೇರ್ ದಾಳಿಗಳು, ಗುರುತಿನ ಕಳ್ಳತನ, ಕ್ರಿಪ್ಟೋ ಕರೆನ್ಸಿ, ಡೇಟಾ ಕುಶಲತೆ ಅಥವಾ ಸೋರಿಕೆ, ಗೌಪ್ಯತೆ ಉಲ್ಲಂಘನೆ, ಮಾನವ ಮತ್ತು ಲೈಂಗಿಕ ಕಳ್ಳಸಾಗಣೆ, ಆನ್‌ಲೈನ್‌ನಲ್ಲಿ ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದು ಇತ್ಯಾದಿ. ಸೈಬರ್ ಅಪರಾಧದ ಬಲಿಯಾಗುವವರಲ್ಲಿ ವ್ಯಕ್ತಿಗಳ ಜತೆಗೆ ಸಂಸ್ಥೆಗಳೂ ಸೇರಿವೆ. ಜಾಗೃತಿ ಒಂದೇ ಇದಕ್ಕೆ ಅತ್ಯುತ್ತಮ ಪರಿಹಾರ. ಅಪರಿಚಿತರೊಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳಬಾರದು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ, ಕುಲಸಚಿವೆ ವಿಜಯಲಕ್ಷ್ಮೀ ತಿರ್ಲಾಪುರ, ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹೊಸಗೌಡ್ರು, ಪಿಎಸ್‌ಐ ರುಕ್ಕಮ್ಮ, ಇತರರಿದ್ದರು.