ಹಾವೇರಿ: ತಾಲೂಕಿನ ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಲಾದ ಬೆಳೆ ಮಾಹಿತಿ ಕುರಿತು ರೈತರು ಆಕ್ಷೇಪಣೆ ಸಲ್ಲಿಸಲು ಆ.18ರವರೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆ ಮಾಹಿತಿ/ ವಿಸ್ತೀರ್ಣದ ಮಾಹಿತಿ ಕುರಿತು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಆಕ್ಷೇಪಣೆ ಸಲ್ಲಿಸಬಹುದು .
ಬೆಳೆ ಸಮೀಕ್ಷೆ ದತ್ತಾಂಶವನ್ನು ಬೆಳೆವಿಮೆ, ಬೆಂಬಲ-ಬೆಲೆಯಡಿ ರೈತರು ಮಾರಾಟ ಮಾಡಲು, ಬೆಳೆ ನಷ್ಟ ಪರಿಹಾರ, ನೇರ ನಗದು ವರ್ಗಾವಣೆ ಹಾಗೂ ಇತರೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಳಕೆ ಮಾಡುವುದರಿಂದ ರೈತರು ಬೆಳೆ ಸಮೀಕ್ಷೆಯಿಂದ ವಂಚಿತರಾಗದೇ, ಇದರಲ್ಲಿ ಪಾಲ್ಗೊಂಡು ತಾವು ಬೆಳೆದ ಬೆಳೆ ಹಾಗೂ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಯು ಒಂದೇ ಇರುವ ಕುರಿತು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಖಾತರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಭಿನ್ನವಾಗಿದ್ದಲ್ಲಿ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ನಂತರದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಗಳಿಂದ ನಿಯೋಜಿಸಿದ ಬೆಳೆ ಸಮೀಕ್ಷೆ ಮೇಲ್ವಿಚಾರಕರನ್ನು ಹಾಗೂ ಸಂಬಂಧಪಟ್ಟ ಗ್ರಾಮಗಳ ಬೆಳೆ ಸಮೀಕ್ಷೆ ಮಾಡುವ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.