ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅಣ್ಣಪ್ಪ ಕಬ್ಬೂರಿಗೆ 20 ವರ್ಷ ಜೈಲು

Judgement
Published on

ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.80 ಲಕ್ಷ ರೂ. ದಂಡ ವಿಧಿಸಿ ಹಾವೇರಿ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1)ದ ನ್ಯಾಯಾಧೀಶ ನಿಂಗೌಡ ಪಾಟೀಲ ಮಂಗಳವಾರ ತೀರ್ಪು ನೀಡಿದ್ದಾರೆ.
ಹಿರೇಕೆರೂರ ತಾಲೂಕು ಪುರಕೊಂಡಿಕೊಪ್ಪದ ಅಣ್ಣಪ್ಪ ಹನುಮಂತಪ್ಪ ಕಬ್ಬೂರ ಶಿಕ್ಷೆಗೀಡಾದ ಅಪರಾಧಿ.
ಅಣ್ಣಪ್ಪ 17 ವರ್ಷ 6 ತಿಂಗಳ ಅಪ್ರಾಪ್ತೆ ಎಂದು ಗೊತ್ತಿದ್ದರೂ ಆಕೆಯನ್ನು ಪುಸಲಾಯಿಸಿ ಸೆ.27, 2019ರಂದು ರಾತ್ರಿ ಅಪಹರಿಸಿದ್ದ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ದ್ಯಾರಮಕ್ಕಿ ಬಡಗದಬೈಲ್ ಗ್ರಾಮದ ಕಾಫಿ ಎಸ್ಟೇಟ್ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಶಿವಮೊಗ್ಗದ ಗಣಪತಿ ದೇವಸ್ಥಾನದಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರೇಕೆರೂರ ವೃತ್ತದ ಅಂದಿನ ತನಿಖಾಧಿಕಾರಿ ಸಿಪಿಐ ಮಂಜುನಾಥ ಪಂಡಿತ ಪ್ರಕರಣದ ತನಿಖೆ ನಡೆಸಿ, ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅಣ್ಣಪ್ಪ ಕಬ್ಬೂರ ಮೇಲೆ ಹೊರಿಸಲಾದ ಪೋಕ್ಸೋ ಕಾಯ್ದೆ 2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ- 2006ರ ಅಡಿಯಲ್ಲಿ ದಾಖಲಾಗಿದ್ದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಅಪರಾಧಿಗೆ 20 ವರ್ಷ ಖಾರಾಗೃಹ ಶಿಕ್ಷೆ ಹಾಗೂ 1.80 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ 1 ಲಕ್ಷ ರೂ. ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ 4 ಲಕ್ಷ ರೂ. ಪರಿಹಾರ ನೀಡುವಂತೆ ಮಂಗಳವಾರ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ ಪ್ರಕರಣದ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net