ಕೊಲೆ ಯತ್ನ ಆರೋಪಿಗಳಿಗೆ ಕಠಿಣ ಶಿಕ್ಷೆ

Published on

ಹಾವೇರಿ: ಜಮೀನುಗಳ ನಡುವೆ ಇರುವ ಬದುವಿನ ತಂಟೆ ವಿಚಾರವಾಗಿ ಕೊಲೆ ಮಾಡಲು ಯತ್ನಿಸಿದ ಮೂವರು ಅಪರಾಧಿಗಳಿಗೆ ಒಂದು ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 35 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಹಾನಗಲ್ಲ ನಿಟಗಿನಕೊಪ್ಪ ಗ್ರಾಮದ ವಿರುಪಾಕ್ಷಪ್ಪ ಹಾದಿಮನಿ, ಭಗವಂತಪ್ಪ ಹಾದಿಮನಿ ಹಾಗೂ ಪ್ರಶಾಂತ ಚಿನ್ನಪ್ಪನವರ ಶಿಕ್ಷೆಗೀಡಾದವರು.
ರಾಜೇಶ ಎಂಬುವರ 3.7 ಎಕರೆ ಹಾಗೂ ಅಪರಾಧಿಗಳ 1.6 ಎಕರೆ ಜಮೀನಿನ ನಡುವಿನ ತಂಟೆ ತಕರಾರು ಇತ್ತು. ಇದೇ ವಿಚಾರವಾಗಿ ವಿರುಪಾಕ್ಷಪ್ಪ ಹಾದಿಮನಿ, ಭಗವಂತಪ್ಪ ಹಾದಿಮನಿ ಹಾಗೂ ಪ್ರಶಾಂತ ಚಿನ್ನಪ್ಪನವರ ಸೆ.29, 2014ರಲ್ಲಿ ರಾಜೇಶನನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಬಗ್ಗೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಪಿಎಸ್‌ಐ ಎಂ.ಎಲ್.ಯಲಿಗಾರ ತನಿಖೆ ನಡೆಸಿ ಆರೋಪಿತ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವನಮಾಲಾ ಆನಂದರಾವ್ ಯಾದವ್ ಅವರು ವಿಚಾರಣೆ ನಡೆಸಿದರು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಹಲ್ಲೆಗೀಡಾದ ರಾಜೇಶನಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net