ಹಾವೇರಿ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಲ್ಪಟ್ಟ 66,736 ಪ್ರಕರಣಗಳಲ್ಲಿ 51,756 ಪ್ರಕರಣಗಳು ಇತ್ಯರ್ಥಗೊಂಡಿದ್ದು, 41,50,95,907 ರೂ. ಮೊತ್ತದ ರಾಜೀಯಾಗಿದೆ.
ಬಾಕಿ ಇರುವ ಇತ್ಯರ್ಥಕ್ಕೆ ಗುರುತಿಸಲಾದ 5,845 ಪ್ರಕರಣಗಳ ಪೈಕಿ 4,954 ಪ್ರಕರಣಗಳು ಇತ್ಯರ್ಥಗೊಂಡಿದ್ದು, 26,13,05,516 ರೂ. ರಾಜೀಯಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ 60,891 ಪ್ರಕರಣಗಳಲ್ಲಿ 46,802 ಪ್ರಕರಣಗಳು ಇತ್ಯರ್ಥಗೊಂಡಿದ್ದು, 15,37,90,391 ರೂ. ಮೊತ್ತದ ರಾಜೀಯಾಗಿದೆ.
ಜಿಲ್ಲಾ ವಕೀಲರ ಸಂಘ, ಜಿಲ್ಲೆಯ ಎಲ್ಲ ತಾಲೂಕು ವಕೀಲರ ಸಂಘ, ಹಾವೇರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಆರಕ್ಷಕ ಇಲಾಖೆಯವರು, ಇತರೆ ಇಲಾಖೆಯವರು ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿದೆ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಲ್ ಲಕ್ಷ್ಮೀನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೆ ಒಂದಾದ 10 ದಂಪತಿ
10 ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜೀ ಮಾಡಿಕೊಂಡಿದ್ದಾರೆ. ಹಾವೇರಿ ನ್ಯಾಯಾಲಯದಲ್ಲಿ 7, ರಾಣೆಬೆನ್ನೂರ, ಬ್ಯಾಡಗಿ ಹಾಗೂ ಶಿಗ್ಗಾಂವಿ ನ್ಯಾಯಾಲಯದಲ್ಲಿ ತಲಾ ಒಂದು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿ ರಾಜೀ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ.