ವರದಕ್ಷಿಣೆ ಕಿರುಕುಳ ನೀಡಿದವರಿಗೆ 10 ವರ್ಷ ಜೈಲು ಶಿಕ್ಷೆ

Judgement
Published on

ಹಾವೇರಿ: ತವರು ಮನೆಯಿಂದ ಐದು ಲಕ್ಷ ರೂ. ಹೆಚ್ಚುವರಿ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೇ ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಪೋಟಿಸಿ ಗೃಹಿಣಿಯ ಹತ್ಯೆಗೆ ಯತ್ನಿಸಿದ್ದ ಅಪರಾಧಿಗಳಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಹಾವೇರಿ ನಿವಾಸಿ ಮದಾರಅಲಿ ಅಬ್ದುಲಖಾದರ್ ಜಿಲಾನಿ ಕಾಗಿನೆಲ್ಲಿ, ದಿಲ್‌ಶಾದ್‌ಬೇಗಂ ಅಬ್ದುಲಖಾದರ್ ಜಿಲಾನಿ ಹಾಗೂ ಅಬ್ದುಲ್ ಖಾದರ್ ಮದರಸಾಬ ಜಿಲಾನಿ ಶಿಕ್ಷೆಗೀಡಾದವರು.
ಮದಾರ ಅಲಿ ಜಿಲಾನಿಯನ್ನು ಆಫ್ರಿನ್ ಎಂಬುವರು 2019, ಏಪ್ರಿಲ್ 28ರಂದು ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ಎರಡು ಲಕ್ಷ ರೂ. ನಗದು, 30 ಗ್ರಾಂ ಚಿನ್ನ, ಎರಡು ಬಂಗಾರದ ಉಂಗುರ ಮತ್ತು ಗೃಹಬಳಕೆ ಸಾಮಾನುಗಳನ್ನು ಆಫ್ರಿನ್ ಕುಟುಂಬದವರು ನೀಡಿದ್ದರು.
ಮದುವೆಯ ನಂತರ ಆಫ್ರಿನ್‌ಗೆ ಹೆಚ್ಚುವರಿಯಾಗಿ ಐದು ಲಕ್ಷ ರೂ. ತರುವಂತೆ ದಿಲ್‌ಶಾದಬೇಗಂ ಅಬ್ದುಲ್‌ಖಾದರ್ ಜಿಲಾನಿ ಹಾಗೂ ಅಬ್ದುಲ್‌ಖಾದರ್ ಮದರಸಾಬ ಜಿಲಾನಿ, ಬೀಬಿಫಾತಿಮಾ ಇರ್ಫಾನ್ ಶಂಸುದ್ದೀನ್ ಸವಣೂರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರು. ಅಡುಗೆ ಸಿಲಿಂಡರ್ ಸ್ಪೋಟವಾಗುವಂತೆ ಅದರ ನಾಬನ್ನು ಲೂಸ್ ಮಾಡಿ ಸ್ಪೋಟಿಸಿ ಆಕೆಯ ಕೊಲೆಗೆ ಯತ್ನಿಸಿದ್ದರು. ಈ ಕುರಿತು ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಿಐ ಮಂಜಣ್ಣ ಟಿ. ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್ ಲಕ್ಷ್ಮೀ ನಾರಾಯಣ ಅವರು, ಆರೋಪಿತರ ಆಪಾದನೆಗಳು ರುಜುವಾತದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಕೂಲಗಿಮಠ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net