ಯುವತಿ ಆತ್ಮಹತ್ಯೆಗೆ ಕಾರಣವಾದವನಿಗೆ ಕಠಿಣ ಶಿಕ್ಷೆ; ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದವ ಕಂಬಿ ಹಿಂದೆ

Judgement
Published on

ಹಾವೇರಿ: ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ, ನಂತರ ಮದುವೆಯಾಗುವುದಿಲ್ಲ ಎಂದು ಮೋಸ ಮಾಡುವ ಮೂಲಕ ಆ ಯುವತಿಯ ಆತ್ಮಹತ್ಯೆಗೆ ಕಾರಣವಾಗಿದ್ದ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ತಾಲೂಕಿನ ಭರಡಿ ಗ್ರಾಮದ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಶಿಕ್ಷೆಗೀಡಾದವ.
ಗ್ರಾಮದ ಇಂದಿರಾ ಗುಡ್ಡಪ್ಪ ಶಿದ್ದಾಪುರ (20) ಎಂಬುವರನ್ನು ಮಂಜುನಾಥ ಪ್ರೀತಿಸಿದ್ದ. ಮದುವೆಯಾಗುವುದಾಗಿಯೂ ನಂಬಿಸಿದ್ದ. ಹಲವು ಬಾರಿ ಜಾತ್ರೆ, ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಮೋಸ ಮಾಡಿದ್ದ. ಇದರಿಂದ ಆಕೆ ಮನನೊಂದು ಮೇ 23, 2020ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಿಎಸ್‌ಐ ಎಂ.ಇ.ಮಣ್ಣಣ್ಣವರ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಂಜುನಾಥನ ಮೇಲಿದ್ದ ಆಪಾದನೆಗಳು ರುಜುವಾತದ ಹಿನ್ನೆಲೆಯಲ್ಲಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಮಂಜುನಾಥನಿಗೆ 10 ವರ್ಷಗಳ ಕಠಿಣ ಸ್ವರೂಪದ ಕಾರಾಗೃಹ ಶಿಕ್ಷೆ ಹಾಗೂ 12,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net