ಹೆಂಡತಿ ಸಾವು ಪ್ರಕರಣ, ಗಂಡನಿಗೆ ಜೀವಾವಧಿ ಶಿಕ್ಷೆ

Judgement
Published on

ಹಾವೇರಿ: ಹೆಂಡತಿ ಮೇಲೆ ದೈಹಿಕ ಹಲ್ಲೆ ನಡೆಸಿ, ಆಕೆಯ ಸಾವಿಗೆ ಕಾರಣನಾದ ಗಂಡನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಶನಿವಾರ ತೀರ್ಪು ನೀಡಿದ್ದಾರೆ.
ಶಿಗ್ಗಾಂವಿ ತಾಲೂಕು ಹಿರೇಮಣಕಟ್ಟಿ ಗ್ರಾಮದ ಮಲ್ಲನಗೌಡ ಗದಿಗೆಪ್ಪಗೌಡ ಪಾಟೀಲ ಶಿಕ್ಷೆಗೀಡಾದವ.
ಮಲ್ಲನಗೌಡ ಪಾಟೀಲ ಇದೇ ಗ್ರಾಮದ ದೀಪಾ ಎಂಬ ಯುವತಿಯನ್ನು ಪ್ರೀತಿಸಿ 2018 ಡಿಸೆಂಬರ್ 11ರಂದು ಮದುವೆಯಾಗಿದ್ದ. ದೀಪಾ ತನಗೆ ಗೊತ್ತಿಲ್ಲದೇ ಮೊಬೈಲ್ ಇಟ್ಟುಕೊಂಡು ಬೇರೆಯವರೊಂದಿಗೆ ಮಾತನಾಡುತ್ತಾಳೆ ಎಂದು ಅನುಮಾನಗೊಂಡಿದ್ದ. 2019ರ ಏಪ್ರಿಲ್ 13ರಂದು ವಾಸವಿದ್ದ ಶಿಗ್ಗಾಂವಿ ಪಟ್ಟಣದ ಮನೆಯಲ್ಲಿ ದೀಪಾಳ ಕೆನ್ನೆಗೆ ಜೋರಾಗಿ ಹೊಡೆದಿದ್ದರಿಂದ ಆಕೆಯ ತಲೆಯು ಗೋಡೆಗೆ ಬಡೆದು ಜ್ಞಾನ ತಪ್ಪಿ ಬಿದ್ದಿದ್ದರು. ಬಳಿಕ ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ದೀಪಾ ಮೃತಪಟ್ಟಿದ್ದರು. ದೀಪಾಳನ್ನು ಕೊಲೆ ಮಾಡುವ ಉದ್ದೇಶದಿಂದ ಕಪಾಳಕ್ಕೆ ಹೊಡೆದಿದ್ದಾಗಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಹಾವೇರಿಯ ಅಂದಿನ ಡಿಎಸ್‌ಪಿ ಕುಮಾರಪ್ಪ ಎಲ್. ತನಿಖೆ ಕೈಗೊಂಡು, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಲ್ಲನಗೌಡ ಪಾಟೀಲನ ಮೇಲೆ ವಿವಿಧ ಕಲಂಗಳಡಿ ದಾಖಲಾಗಿದ್ದ ಆಪಾದನೆಗಳು ರುಜುವಾತಾದ ಹಿನ್ನೆಲೆಯಲ್ಲಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 32 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net