ನಗರಸಭೆ ಖಾಲಿ ಸೈಟಲ್ಲಿ ಕಸದ ರಾಶಿ; ಶಿವಾಜಿ ನಗರದಲ್ಲಿ ದುರ್ನಾತ; ಅಂಗನವಾಡಿ ಮಕ್ಕಳಿಗೆ ರೋಗ ಭೀತಿ

26 HVR 2
Published on

ಹಾವೇರಿ: ನಗರದ ಖಾಲಿ ಸೈಟುಗಳಲ್ಲಿ ಕಸ-ಕಡ್ಡಿ, ಗಿಡ- ಗಂಟಿ ಬೆಳೆದಿದ್ದರೆ ಅಂತಹ ಸೈಟಿನ ಮಾಲೀಕರಿಗೆ ದಂಡ ಹಾಕಿ ಸ್ವಚ್ಛಗೊಳಿಸಬೇಕಾದ ಜವಾಬ್ದಾರಿ ಹೊತ್ತಿರುವ ಹಾವೇರಿ ನಗರಸಭೆ, ತನ್ನದೇ ಮಾಲೀಕತ್ವದಲ್ಲಿರುವ ಸೈಟಿನಲ್ಲಿ ಜನ ಕಸ ತಂದು ಸುರಿಯುತ್ತಿದ್ದರೂ ಕಣ್ಮುಚ್ಚಿಕೊಂಡಿದೆ.
ಇಲ್ಲಿನ ಶಿವಾಜಿ ನಗರದ 2 ಮತ್ತು 3ನೇ ಕ್ರಾಸ್‌ನ ಅಂಗನವಾಡಿ ಕೇಂದ್ರದ ಎದುರು ನಗರಸಭೆ ಮಾಲೀಕತ್ವದ ಖಾಲಿ ಸೈಟಿನಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಅಲ್ಲದೇ ಇಲ್ಲಿ ಕೆಲವರು ದನಗಳನ್ನು ಮೇಯಿಸಲು ಕೊಟ್ಟಿಗೆಯನ್ನಾಗಿ ಬಳಸುತ್ತಿದ್ದಾರೆ. ಹಾಗಾಗಿ, ಇಲ್ಲಿನ ಅಂಗನವಾಡಿಗೆ ಬರುವ ಪುಟ್ಟ ಮಕ್ಕಳು ಹಾಗೂ ಅಕ್ಕಪಕ್ಕದ ಜನರಲ್ಲಿ ರೋಗಭೀತಿ ಶುರುವಾಗಿದೆ.
ಅಂಗನವಾಡಿ ಮತ್ತು ಜೈಂಟ್ಸ್ ಪ್ರಾಥಮಿಕ ಶಾಲೆ ಮಧ್ಯದಲ್ಲಿರುವ ಈ ಖಾಲಿ ನಿವೇಶನದಲ್ಲಿ ಹಲವು ಜನ ನಿತ್ಯವೂ ಕಸ, ಮುಸುರಿ, ಹಳೆಯ ಬಟ್ಟೆ, ಮೃತಪಟ್ಟವರ ಮೇಲೆ ಧರಿಸಿದ್ದ ಬಟ್ಟೆಗಳನ್ನು ತಂದು ಎಸೆಯುತ್ತಾರೆ. ಇದರಿಂದಾಗಿ ಈ ಸ್ಥಳ ಅಕ್ಷರಶಃ ತಿಪ್ಪೆಯಾಗಿ ಮಾರ್ಪಟ್ಟಿದೆ. ಹಂದಿ, ನಾಯಿಗಳು ಕಸ ಎಳೆದು ತಂದು ರಸ್ತೆಗೆ ಹಾಕುತ್ತಿವೆ. ಹಾಗಾಗಿ, ಸುತ್ತಮುತ್ತಲಿನ ಜನರಲ್ಲಿ ರೋಗಭೀತಿ ಶುರುವಾಗಿದೆ.
ಮನವಿಗೆ ಸ್ಪಂದಿಸಿಲ್ಲ
ಒಂದು ವರ್ಷಕ್ಕೂ ಹಿಂದಿನಿಂದಿ ಇಲ್ಲಿ ಕಸದ ಸಮಸ್ಯೆ ಇದೆ. ಕೂಡಲೇ ಸ್ವಚ್ಛತೆ ಕೈಗೊಂಡು ಕಾಂಪೌಂಡ್ ನಿರ್ಮಿಸಿ. ಈ ಸ್ಥಳದಲ್ಲಿ ಸಮುದಾಯ ಭವನ ಅಥವಾ ಧ್ಯಾನ ಮಂದಿರ ನಿರ್ಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಿ ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ಸೆ.13ರಂದು ಅಂಚೆ ಮೂಲಕ ಪತ್ರವನ್ನೂ ಬರೆಯಲಾಗಿದೆ. ಆದರೂ, ಯಾರೂ ಈ ಕಡೆ ಗಮನ ಹರಿಸಿಲ್ಲ. ಇನ್ನಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಎಚ್.ಟಿ.ಕರಿತಿಪ್ಪಯ್ಯ, ಹೊನ್ನಪ್ಪ ಗೊಂಗಚ್ಚಿ, ಹನುಮಂತಪ್ಪ ಕೊರವರ, ಪಾತವ್ವ ಬ್ಯಾಡಗಿ, ಘನಿಸಾಬ್ ಬ್ಯಾಡಗಿ, ರವಿ ಸೊನ್ನದ, ಇತರರು ಆಗ್ರಹಿಸಿದ್ದಾರೆ.
ಕಸದ ಡಬ್ಬಿಯಲ್ಲಿ ಹಾಕಿ
ರಸ್ತೆಬದಿ, ಚರಂಡಿಯಲ್ಲಿ ಕಸ ಎಸೆಯುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಚಿಕುನ್ ಗುನ್ಯಾ, ಡೆಂಘಿ, ಕಾಲರಾ, ಮಲೇರಿಯಾದಂಥ ಭಯಾನಕ ರೋಗಗಳು ಅಕ್ಕಪಕ್ಕದ ಜನರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ, ಜನರೂ ಕೂಡ ಈ ಬಗ್ಗೆ ಜಾಗೃತರಾಗಬೇಕು. ಈಗಾಗಲೇ ನಗರಸಭೆಯಿಂದ ವಿತರಿಸಿರುವ ಎರಡು ಕಸದ ಡಬ್ಬಿಗಳಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸದ ವಾಹನ ಮನೆಯ ಬಳಿ ಬಂದಾಗ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂಬುದು 'ವಿಜಯವಾಣಿ' ಕಳಕಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net