ವಾಹನದ ರಿಪೇರಿ ಮೊತ್ತ ಪಾವತಿಗೆ ಇನ್ಸೂರೆನ್ ಕಂಪನಿಗೆ ಆದೇಶ

Judgement
Published on

ಹಾವೇರಿ: ವಾಹನದ ರಿಪೇರಿ ಮೊತ್ತವನ್ನು 30 ದಿನದೊಳಗಾಗಿ ವಾಹನ ಮಾಲೀಕರಿಗೆ ಪಾವತಿಸುವಂತೆ ಇನ್ಸೂರನ್ಸ್ ಕಂಪನಿಯೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಬ್ಯಾಡಗಿಯ ಬಾಲಚಂದ್ರ ಪಾಟೀಲ ತಮ್ಮ ಕಾರಿಗೆ 28, ಮಾರ್ಚ್ 2019ರಿಂದ 27, ಮಾರ್ಚ್ 2022ರವರೆಗೆ ಮೂರು ವರ್ಷಗಳ ಪ್ಯಾಕೇಜ್ ಪಾಲಿಸಿ ಪಡೆದಿದ್ದರು. 13, ಅಕ್ಟೋಬರ್ 2021ರಂದು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿ ಟೈರ್‌ನಿಂದ ಸಿಡಿದ ಕಲ್ಲು ಕಾರಿನ ಮುಂಗಾದ ಗ್ಲಾಸಿಗೆ ಬಿದ್ದು, ಮುಂದಿನ ಭಾಗದ ಗಾಜು ಒಡೆದ ಕಾರಣ ಬೆಂಗಳೂರಿನ ಅಧಿಕೃತ ಡೀಲರ್ ಬಳಿ ರಿಪೇರಿ ಮಾಡಿಸಿ, ರಿಪೇರಿ ಬಿಲ್, ವಾಹನದ ನೋಂದಣಿ ಪ್ರಮಾಣಪತ್ರ, ವಾಹನದ ಚಾಲನಾ ಪ್ರಮಾಣ ಪತ್ರವನ್ನು ಹಾವೇರಿ ಕಚೇರಿಗೆ 2, ನವೆಂಬರ್ 2021ರಂದು ಸಲ್ಲಿಸಿದ್ದರು. ವಾಹನದ ಅಪಘಾತದ ನಂತರ ತಪಾಸಣೆಗೆ ಅವಕಾಶ ನೀಡದ ಕಾರಣ ಸಂಸ್ಥೆಯವರು ಪರಿಹಾರ ಪಾವತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಕಾರಿನ ಗಾಜು ಬದಲಾಯಿಸಿದ ವೆಚ್ಚ 1,66,372 ರೂ. ಹಾಗೂ ಮಾಸಿಕ -ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಮತ್ತು ಪ್ರಕರಣದ ವೆಚ್ಚ ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net