ವಾಹನದ ಐಡಿವಿ ಮೊತ್ತ ಪಾವತಿಗೆ ಇನ್ಸೂರೆನ್ಸ್ ಕಂಪನಿಗೆ ಆದೇಶ

Judgement
Published on

ಹಾವೇರಿ: ಕಳುವಾದ ದ್ವಿಚಕ್ರ ವಾಹನದ ಐಡಿವಿ ಮೊತ್ತವನ್ನು 30 ದಿನದೊಳಗಾಗಿ ವಾಹನ ಮಾಲಿಕನಿಗೆ ಪಾವತಿಸುವಂತೆ ಜನರಲ್ ಇನ್ಸೂರನ್ಸ್ ಕಂಪನಿಯೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ. ರಾಣೆಬೆನ್ನೂರ ತಾಲೂಕು ಕುರುಬಗೇರಿ ಗ್ರಾಮದ ವಿರೇಶ ಮಾದೇವಯ್ಯ ಮಠದ ಖರೀದಿಸಿದ ದ್ವಿಚಕ್ರ ವಾಹನಕ್ಕೆ ಕಂಪನಿಯೊಂದರಿಂದ ಜನರಲ್ ಇನ್ಸೂರನ್ಸ್ ಪಾಲಿಸಿ ಪಡೆದಿದ್ದರು. ಪಾಲಿಸಿ ಅವಧಿ 10 ಜನವರಿ, 2020ರಿಂದ 9 ಜನವರಿ 2021ರವರೆಗೆ ಇತ್ತು. ಬ್ಯಾಡಗಿ ನಗರದಲ್ಲಿ 13 ಫೆಬ್ರವರಿ 2020ರಂದು ಖಾಲಿ ಜಾಗದಲ್ಲಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ ವೇಳೆ ಬೈಕ್ ಕಳುವಾಗಿತ್ತು. ಎಲ್ಲ ಕಡೆ ಹುಡುಕಿದರೂ ವಾಹನ ಸಿಗದ ಕಾರಣ 20 ಫೆಬ್ರವರಿ 2020ರಂದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಾಹನ ಪತ್ತೆಯಾಗದ ಕಾರಣ ಪೊಲೀಸರು ನ್ಯಾಯಾಲಯಕ್ಕೆ ಸಿ ವರದಿ ಸಲ್ಲಿಸಿದ್ದರು. ವಿರೇಶ ಮಠದ ಅವರು ಕ್ಲೇಮ್‌ಗಾಗಿ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ವಾಹನ ಕಳುವಾದ ಏಳು ದಿನಗಳ ನಂತರ ಮಾಹಿತಿ ನೀಡಿದ್ದರಿಂದ ಹಾಗೂ 601 ದಿನಗಳ ನಂತರ ವಿಮೆ ಕಂಪನಿಗೆ ತಿಳಿಸಿದ ಕಾರಣ ವಿಮಾ ಕಂಪನಿ ಕ್ಲೇಮ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ ಪ್ರಕರಣದ ವಿಚಾರಣೆ ನಡೆಸಿತು. ಕಳುವಾದ ಬೈಕ್‌ನ ಐಡಿವಿ ಬೆಲೆ 56,335 ರೂ. ಹಾಗೂ ಮಾನಸಿಕ -ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಮತ್ತು ಪ್ರಕರಣದ ವೆಚ್ಚ ಎರಡು ಸಾವಿರ ರೂ. 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net