ಹಾವೇರಿ ಸೇವಾ ನೂನ್ಯತೆ ಪರಿಹಾರ ಮೊತ್ತವನ್ನು 30 ದಿನದೊಳಗೆ ಗ್ರಾಹಕರಿಗೆ ಪಾವತಿಸುವಂತೆ ಭಾರತೀಯ ಜೀವ ವಿಮಾ ನಿಗಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.
ರಾಣೇಬೆನ್ನೂರಿನ ರಾಧಮ್ಮ ಅವರ ಪತಿ ರಮೇಶ ಹನುಮಂತಪ್ಪ ಗುತ್ತಲ ಅವರು ಕರ್ನಾಟಕ ಬ್ಯಾಂಕ್ ರಾಣೆಬೆನ್ನೂರ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಮೇ 19, 2015ರಂದು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಪಾಲಿಸಿ ಪಡೆದಿದ್ದರು. ವಾರ್ಷಿಕ 330 ರೂ. ಪಾಲಿಸಿ ಕಂತುಗಳನ್ನು ಬ್ಯಾಂಕಿನ ಮೂಲಕ ವಿಮಾ ಕಂಪನಿಗೆ ಜುಲೈ 19, 2019ರವರೆಗೆ ಪಾವತಿಸಿದ್ದರು. ಜುಲೈ 24, 2019ರಂದು ರಮೇಶ ಗುತ್ತಲ ಮರಣ ಹೊಂದಿದ್ದರು.
ವಿಮಾ ಪಾಲಿಸಿ ಮೊತ್ತ ಪಡೆಯಲು ರಾಧಮ್ಮ ಬ್ಯಾಂಕ್ ಶಾಖೆ ಮೂಲಕ ಭಾರತೀಯ ಜೀವ ವಿಮಾ ನಿಗಮಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು. ಬ್ಯಾಂಕ್ ಶಾಖೆಯವರು ಸೇವೆ ನೀಡುವ ಸಂಸ್ಥೆಯಾಗಿದ್ದು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಭಾರತೀಯ ಜೀವ ವಿಮಾ ನಿಗಮಕ್ಕೆ ಕಾನೂನು ರೀತ್ಯ ನೋಟೀಸ್ ನೀಡಿದ್ದರೂ ಪರಿಹಾರ ಮೊತ್ತ ನೀಡದ ಕಾರಣ ಕರ್ನಾಟಕ ಬ್ಯಾಂಕ್ ರಾಣೇಬೆನ್ನೂರ ಶಾಖೆ, ಭಾರತೀಯ ಜೀವ ವಿಮಾ ನಿಗಮ ರಾಣೇಬೆನ್ನೂರು ಹಾಗೂ ಮಂಗಳೂರು ಶಾಖೆ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಸದಸ್ಯರು ಹಾಗೂ ಪ್ರಭಾರಿ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ ಹಿರೇಮಠ ನೇತೃತ್ವದ ತಂಡ ಭಾರತೀಯ ಜೀವ ವಿಮಾ ನಿಗಮ ರಾಣೆಬೆನ್ನೂರ ಹಾಗೂ ಮಂಗಳೂರು ಶಾಖೆ ಸೇವಾ ನ್ಯೂನ್ಯತೆಗಾಗಿ ಎರಡು ಲಕ್ಷ ರೂ. ಶೇ.6ರ ಬಡ್ಡಿಯೊಂದಿಗೆ ಹಾಗೂ ಕರ್ನಾಟಕ ಬ್ಯಾಂಕ್ ಶಾಖೆ 10 ಸಾವಿರ ರೂ. ದಂಡವನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ.
ಭಾರತೀಯ ಜೀವ ವಿಮಾ ನಿಗಮ ರಾಣೆಬೆನ್ನೂರ ಹಾಗೂ ಮಂಗಳೂರು ಶಾಖೆಯು ನಷ್ಟ ಭರ್ತಿಗಾಗಿ ಎರಡು ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಎರಡು ಸಾವಿರ ರೂ. ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.