ಆನ್‌ಲೈನ್ ಖರೀದಿ ಬಗ್ಗೆ ಇರಲಿ ಎಚ್ಚರ; ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಮಾರಂಭದಲ್ಲಿ ಈಶ್ವರಪ್ಪ ಬಿ.ಎಸ್. ಸಲಹೆ

24 HVR 9
Published on

ಹಾವೇರಿ: ವಿದ್ಯಾರ್ಥಿಗಳು ಹೆಚ್ಚಾಗಿ ಆನ್‌ಲೈನ್ ಖರೀದಿಗೆ ಮೊರೆ ಹೋಗುತ್ತಿದ್ದು, ಆನ್‌ಲೈನ್ ಖರೀದಿ ಕುರಿತು ಎಚ್ಚರಿಕೆ ವಹಿಸಬೇಕು. ಆನ್‌ಲೈನ್ ಸೇವೆಯಲ್ಲಿ ಲೋಪಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಸಲಹೆ ನೀಡಿದರು.

ನಗರದ ಹುಕ್ಕೇರಿ ಮಠದ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖರೀದಿಸಿ ವಸ್ತುಗಳ ರಸೀದಿ, ವಾರಂಟಿ ಹಾಗೂ ಗ್ಯಾರಂಟಿ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ಮಾರಾಟಗಾರರ ವಿರುದ್ಧ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.

ಒಂದು ವಸ್ತು ಅಥವಾ ಸೇವೆಯನ್ನು ಹಣ ಕೊಟ್ಟು ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ವಸ್ತುಗಳನ್ನು ಖರೀದಿಸುವಾಗ ಆತುರಮಾಡದೇ ಯೋಚನೆಮಾಡಿ ಖರೀದಿಸಬೇಕು. ದೈನಂದಿನ ವ್ಯವಹಾರದಲ್ಲಿ ಖರೀದಿಸಿದ ವಸ್ತುಗಳಲ್ಲಿ ನ್ಯೂನ್ಯತೆ ಅಥವಾ ದೋಷಗಳು ಕಂಡುಬಂದಲ್ಲಿ ದೂರು ಸಲ್ಲಿಸಿ ಎಂದರು.

ಶಿವರಾಜ ಕಂಬಳಿ ಗ್ರಾಹಕರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಉಮಾದೇವಿ ಹಿರೇಮಠ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಚಂದ್ರಶೇಖರ, ಮುಖ್ಯೋಪಾಧ್ಯಾಯರಾದ ಚಿ.ವೈ.ಅಂತರವಳ್ಳಿ ಹಾಗೂ ಮದರಲಿ ಕಾಗಿನೆಲ್ಲಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net