ಎಸ್‌ಸಿ, ಎಸ್‌ಟಿಗೆ ಕೊಡುಗೆ ನೀಡಿದ್ದು ಕಾಂಗ್ರೆಸ್ ಪಕ್ಷ; ಹಾವೇರಿ ಲೋಕಸಭಾ ಚುನಾವಣೆ ಉಸ್ತುವಾರಿ ಬಸವರಾಜ ಹೆಡಿಗೊಂಡ ಹೇಳಿಕೆ

Congress Sc
Published on

ಹಾವೇರಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಬಿಟ್ಟರೆ ದೇಶದಲ್ಲಿ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡಗಳಿಗೆ ಏನಾದರೂ ಕೊಡುಗೆ ನೀಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ದಲಿತರ ಪರವಾಗಿ ಕಾಂಗ್ರೆಸ್ ಯಾವಾಗಲೂ ಧ್ವನಿ ಎತ್ತುತ್ತದೆ ಎಂದು ಹಾವೇರಿ ಲೋಕಸಭಾ ಚುನಾವಣೆ ಉಸ್ತುವಾರಿ ಬಸವರಾಜ ಹೆಡಿಗೊಂಡ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013-18ರಲ್ಲಿ ಎಲ್ಲ ನಿಗಮದ ಸಾಲಮನ್ನಾ ಮಾಡಿದರು. ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಮೂಲಕ ಅವಕಾಶ ನೀಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಗೆ ಪ್ರತಿ ವರ್ಷಕ್ಕೆ ಒಂದು ಲಕ್ಷ ರೂ.ಯನ್ನು ಮಹಾಲಕ್ಷ್ಮೀ ಯೋಜನೆಯಡಿ ಕೊಡುವುದಾಗಿ ಪಕ್ಷ ಘೋಷಿಸಿದೆ. ಎಲ್ಲ ದಲಿತರು ಒಂದಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿ ಬಂದ್ ಆಗುತ್ತದೆ ಎಂಬುದು ಶುದ್ದ ಸುಳ್ಳು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಏನೂ ಕೊಡುಗೆ ಕೊಟ್ಟಿಲ್ಲ. ಸಂಸದರಾಗಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ದುರ್ಗಪ್ಪ ನೀರಲಗಿ, ಸಂಜಯಗಾಂಧಿ ಸಂಜೀವಣ್ಣವರ, ಸಂಜಯ ದೊಡ್ಡಮನಿ, ಎಸ್.ಎಫ್.ಮಣಕಟ್ಟಿ, ಏಳುಕೋಟೆಪ್ಪ ಪಾಟೀಲ, ಬಸವರಾಜ ಮಾಳಗಿ, ಮರಶುರಾಮ ಮರಿಯಮ್ಮನವರ, ಫಕ್ಕೀರೇಶ ನೀರಲಗಿ, ಮರಿಯಪ್ಪ ನಡುವಿನಮನಿ, ರವಿ ದಂಡಿನ, ಶ್ರೀಕಾಂತ ಗಡ್ಡಿ, ಸುರೇಶ ಹಳ್ಳಳ್ಳಿ, ಭರಮಪ್ಪ ಹರಿಜನ, ಇತರರಿದ್ದರು.
ಏ.15ಕ್ಕೆ ಗಡ್ಡದೇವರಮಠ ನಾಮಪತ್ರ ಸಲ್ಲಿಕೆ
ಹಾವೇರಿಯಲ್ಲಿ ಏ.15ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಏಳು ಎಂಎಲ್‌ಎಗಳು, ಇಬ್ಬರು ಉಸ್ತುವಾರಿ ಸಚಿವರು ಇದ್ದಾರೆ. ಗಡ್ಡದೇವರಮಠ ಗೆಲುವು ಖಚಿತ ಎಂದು ಹೆಡಿಗೊಂಡ ಹೇಳಿದರು.
ಬಿಜೆಪಿ ಸಂವಿಧಾನ ತಿರುಚುತ್ತದೆ
ಸಂವಿಧಾನ ರಕ್ಷಣೆ ಆಗಿದ್ದೇ ಕಾಂಗ್ರೆಸ್‌ನಿಂದ. ಈ ಸಲ ಬಿಜೆಪಿ ಮತ್ತೆ ಬಹುಮತ ಪಡೆದರೆ ಸಂವಿಧಾನ ತಿರುಚಲಿದೆ. ಹಾಗೆ ಆಗಲು ಬಿಡಬಾರದು. ಎಲ್ಲ ಬಜೆಟ್‌ಗಳಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಸಾವಿರಾರು ಕೋಟಿ ರೂ. ಮೀಸಲಿಟ್ಟಿದೆ. ಕ್ಷೇತ್ರದ ನಾಲ್ಕೂವರೆ ಲಕ್ಷ ಎಸ್‌ಸಿ, ಎಸ್‌ಟಿ ಮತದಾರರು ಈ ಬಾರಿ ಕಾಂಗ್ರೆಸ್ ಕೈಹಿಡಿಯುತ್ತಾರೆ. ಎದುರಾಳಿ ಎಷ್ಟೇ ಬಲಾಢ್ಯ ಆಗಿದ್ದರೂ ಈ ಬಾರಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಎರಡೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಗಡ್ಡದೇವರಮಠ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net