ಹಾವೇರಿ ಅಭಿವೃದ್ಧಿ ಹಿನ್ನೆಡೆಗೆ ಶಾಸಕ ಓಲೇಕಾರ ಕಾರಣ; ರುದ್ರಪ್ಪ ಲಮಾಣಿ ಆರೋಪ

Rudrappa Lamani
Published on

ಹಾವೇರಿ: ಹಾವೇರಿ ನಗರ ಹಾಗೂ ಹಳ್ಳಿಗಳ ರಸ್ತೆಗಳು ಹದಗೆಟ್ಟಿವೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಎಲ್ಲ ಅಭಿವೃದ್ಧಿ ಹಿನ್ನೆಡೆಗೆ ಶಾಸಕ ನೆಹರು ಓಲೇಕಾರ ಅವರೇ ಕಾರಣ. ಸಮರ್ಪಕವಾಗಿ ಅನುದಾನ ತಂದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಚಾರಗಟ್ಟಿಯಿಂದ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್ ಹಾಳಾಗಿದೆ. ಇದನ್ನು ದುರಸ್ತಿಪಡಿಸಲು ಸ್ಥಳೀಯ ನಗರಸಭೆಗೆ ಶಾಸಕರು ಅನುದಾನ ಕೊಡಿಸಲಿಲ್ಲ. ಒಂದೇ ಒಂದು ದಿನ ಕ್ಷೇತ್ರದ ಬಗ್ಗೆ ಸದನದಲ್ಲಿ ಧನಿ ಎತ್ತಲಿಲ್ಲ ಎಂದು ಜನ ಥೂ ಚೀ ಎಂದು ಉಗಿಯುತ್ತಿದ್ದಾರೆ ಎಂದು ಹೇಳಿದರು.
ನಾನು ಶಾಸಕನಾಗಿದ್ದಾಗ ಹೆಗ್ಗೇರಿ ಕೆರೆ ಆವರಣದಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ 6 ಕೋಟಿ ಅನುದಾನ ಕೊಡಿಸಿದ್ದೆ. ಎನ್‌ಒಸಿ ಪಡೆಯಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ನಂತರ ಬಂದ ಶಾಸಕರು 6 ಕೋಟಿ ರೂ. ನೀರಲ್ಲಿ ಹಾಕಿದರು. ಮೆಡಿಕಲ್ ಕಾಲೇಜಿಗೆ ಇನ್ನೂ ಸಿಬ್ಬಂದಿ ನಿಯೋಜನೆಯಾಗಿಲ್ಲ. ಮಕ್ಕಳ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದರು.
ಡಬಲ್ ಇಂಜಿನ್ ಸರ್ಕಾರ ಟ್ರಬಲ್ ಇಂಜಿನ್ ಆಗಿ ಅಲ್ಲೇ ನಿಂತಿದೆ. ಸಿಎಂ ಕ್ಷೇತ್ರ ಶಿಗ್ಗಾಂವಿ ತಾಲೂಕಿನ ಬಂಕಾಪುರದಿಂದ ಗದಗ ತೆರಳುವ ರಸ್ತೆ ತೀವ್ರ ಹದಗೆಟ್ಟಿದೆ. ಜಿಲ್ಲೆಯಲ್ಲಿ ಇಂತಹ ಅನೇಕ ರಸ್ತೆಗಳಿವೆ. ಯಾವುದೇ ಅಭಿವೃದ್ಧಿ ಕೆಲಸವನ್ನು ಬಿಜೆಪಿ ಮಾಡಿಲ್ಲ. ನಾನು ಶಾಸಕನಾದರೆ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ಯುಜಿಡಿಗೆ ಪ್ರಾಮುಖ್ಯತೆ ಕೊಡುತ್ತೇನೆ ಎಂದರು.
ಏ.17ಕ್ಕೆ ನಾಮಪತ್ರ ಸಲ್ಲಿಕೆ
ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ.17ರಂದು ಬೆಳಗ್ಗೆ 10 ಗಂಟೆಗೆ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ನಗರದ ವೀರಭದ್ರೇಶ್ವರ ದೇಗುಲದಿಂದ ಮೆರವಣಿಗೆ ಮೂಲಕ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ರುದ್ರಪ್ಪ ಲಮಾಣಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net