ರಟ್ಟಿಹಳ್ಳಿ ಪ.ಪಂ. ಕಾಂಗ್ರೆಸ್ ಪಡೆಗೆ ಬಹುತೇಕ ನಿಕ್ಕಿ; ಇಬ್ಬರು ಪಕ್ಷೇತರ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

27 HVR 6 B
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಮೊದಲ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ನಡೆಯಲಿರುವ ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ನಿರ್ಣಾಯಕ ಪಾತ್ರ ವಹಿಸಲಿರುವ ಇಬ್ಬರು ಪಕ್ಷೇತರ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಮೂಲಕ ರಟ್ಟಿಹಳ್ಳಿ ಪ.ಪಂ. ಕೈವಶವಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಬದಲ್ಲಿ ಪಕ್ಷೇತರ ಸದಸ್ಯರಾದ 15ನೇ ವಾರ್ಡ್‌ನ ಲಲಿತಾ ಚೆನ್ನಗೌಡ್ರ ಹಾಗೂ 9ನೇ ವಾರ್ಡ್‌ನ ಸದಸ್ಯ ಶಿವಕುಮಾರ ಉಪ್ಪಾರ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಶಾಸಕ ಯು.ಬಿ.ಬಣಕಾರ ಅವರಿಂದ ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

15 ಸದಸ್ಯರ ಬಲ ಇರುವ ಪ.ಪಂ.ಯಲ್ಲಿ 7 ಕಾಂಗ್ರೆಸ್, 6 ಬಿಜೆಪಿ ಹಾಗೂ 2 ಪಕ್ಷೇತರ ಸದಸ್ಯರು ವಿಜೇತರಾಗಿದ್ದರು. ಸೆ.30ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಘೊಷಣೆಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ‘ಅ’ ಮೀಸಲಾತಿ ಘೋಷಿಸಲಾಗಿದೆ. ಅಧಿಕಾರ ಪಡೆಯಲು ಎರಡೂ ಪಕ್ಷಗಳಿಗೆ ಪಕ್ಷೇತರರ ಬೆಂಬಲ ಅಗತ್ಯವಾಗಿತ್ತು.

ಮಾಜಿ ಸಚಿವ ಬಿ.ಸಿ.ಪಾಟೀಲರು ಪಕ್ಷೇತರರನ್ನು ಬಿಜೆಪಿಗೆ ಸೆಳೆಯಲು ಭಾರೀ ಪ್ರಯತ್ನ ನಡೆಸಿದ್ದರು. ಆದರೆ, ಶಾಸಕ ಯು.ಬಿ.ಬಣಕಾರ ಹಾಗೂ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಆಡಳಿತಾರೂಢ ಕಾಂಗ್ರೆಸ್ ಪಕ್ಷದತ್ತ ಇಬ್ಬರೂ ಪಕ್ಷೇತರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಎಂ.ಎಂ.ಹಿರೇಮಠ, ಎಂ.ಎಂ.ಮೈದೂರ, ಕೊಟ್ರೇಶಪ್ಪ ಬಸೇಗೆಣ್ಣಿ, ಡಾ.ಆರ್.ಎಂ.ಕುಬೇರಪ್ಪ, ರಮೇಶ ಮಡಿವಾಳರ, ಪಿ.ಡಿ.ಬಸನಗೌಡ್ರ, ಶಿವಕುಮಾರ ತಾವರಗಿ, ರಾಘವೇಂದ್ರ ಬಾಸೂರ, ಇತರರಿದ್ದರು.

ಸದಸ್ಯರಿಗೆ ವಿಪ್ ಜಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಅವಧಿಯಲ್ಲಿ ರಟ್ಟಿಹಳ್ಳಿ ತಾಲೂಕು ಘೋಷಿಸಿದ್ದರು. ರಟ್ಟಿಹಳ್ಳಿ ಪ.ಪಂ. ಮೊದಲ ಚುನಾವಣೆಯಲ್ಲಿ ಪಕ್ಷದ ಏಳು ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಇದೀಗ ಪಕ್ಷೇತರ ಇಬ್ಬರೂ ಸದಸ್ಯರು ಪಕ್ಷದ ಸಿದ್ದಾಂತ ಒಪ್ಪಿಕೊಂಡು ಅಧಿಕೃತವಾಗಿ ಪಕ್ಷದ ಸದಸ್ಯರಾಗಿದ್ದಾರೆ. ಅವರಿಗೆ ಪಕ್ಷದ ಸದಸ್ಯತ್ವ ನೀಡಲಾಗಿದೆ. ಪಕ್ಷದಿಂದ ಅವರಿಗೆ ಅನ್ಯಾಯ ಮಾಡುವುದಿಲ್ಲ. ಎಲ್ಲರೂ ಒಂದಾಗಿ ರಟ್ಟಿಹಳ್ಳಿಯ ಅಭಿವೃದ್ಧಿ ಮಾಡಲು ಶ್ರಮಿಸಿ ಎಂದು ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಸಲಹೆ ನೀಡಿದರು. ಎಲ್ಲ 9 ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸ್ಥಾನಕ್ಕೆ ಬೇಡಿಕೆ

ಅಧ್ಯಕ್ಷ ಸ್ಥಾನಕ್ಕೆ ಇಬ್ಬರೂ ಪಕ್ಷೇತರರು ಬೇಡಿಕೆ ಇಟ್ಟಿದ್ದು, ಒಬ್ಬರಿಗೆ ಅಧ್ಯಕ್ಷ ಸ್ಥಾನ ಮತ್ತೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ಕೊಡುವ ಸಾಧ್ಯತೆ ಇದೆ. ಹಿಂದುಳಿದ ವರ್ಗದ ನಾನು ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿದ್ದೇನೆ. ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿಟ್ಟು ಕಾಂಗ್ರೆಸ್ ಸೇರಿದ್ದೇನೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಹೌದು ಎಂದು ಪಕ್ಷೇತರ ಸದಸ್ಯ ಶಿವಕುಮಾರ ಉಪ್ಪಾರ ಹೇಳಿದರು. ಬೇಷರತ್ ಆಗಿ ಪಕ್ಷ ಸೇರಿದ್ದೇವೆ ಎಂದು ಶಂಕರಗೌಡ ತಿಳಿಸಿದರು.

ಕೋಟ್:

ರಟ್ಟಿಹಳ್ಳಿ ಇತಿಹಾಸ ನೋಡಿದರೆ ಯಾವಾಗಲೂ ಬಿಜೆಪಿ ಕೈಯಲ್ಲಿ ಇತ್ತು. ಇದೀಗ ಕಾಂಗ್ರೆಸ್ ಪರವಾಗಿದೆ. ಶಂಕರಗೌಡ ಚೆನ್ನಗೌಡ್ರ ಅವರು ಇತ್ತೀಚೆಗೆ ಸಿಎಂ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗಲು ಒಪ್ಪಿದ್ದರು. ಪಕ್ಷದ ಮುಖಂಡರ ಮೇಲೆ ವಿಶ್ವಾಸವಿಟ್ಟು ಇಬ್ಬರೂ ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

- ಯು.ಬಿ.ಬಣಕಾರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net