ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಆಕ್ರೋಶ; ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ವಾಪಸ್‌ಗೆ ಆಗ್ರಹ; ಹಾವೇರಿಯಲ್ಲಿ ಕೈಪಡೆ ಬೃಹತ್ ಪ್ರತಿಭಟನೆ

19 HVR 2 A
Published on

ಹಾವೇರಿ: ಮುಡಾ ನಿವೇಶನ ಹಂಚಿಕೆ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಿಂದ ಆರಂಭವಾದ ಪ್ರತಿಭಟನಾ ರ‌್ಯಾಲಿ ಪಿಬಿ ರಸ್ತೆ ಮುಖಾಂತರ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಸಾಗಿತು. ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕೆಲಕಾಲ ವಾಹನಗಳ ಸಂಚಾರ ತಡೆದು ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಪರವಾಗಿ, ಬಿಜೆಪಿ ವಿರುದ್ಧ ದ ಪ್ಲೇಕಾರ್ಡ್ ಪ್ರದರ್ಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದೇ ಬಿಜೆಪಿಯವರು ಈ ರೀತಿ ಅಡ್ಡದಾರಿ ಅನುಸರಿಸಲು ಮುಂದಾಗಿದ್ದಾರೆ. ಬಿಜೆಪಿ ಯಾವತ್ತೂ ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆಗೆ ಸರ್ಕಾರ ರಚಿಸಿ ಶಿವಸೇನೆ ಒಡೆದು ಹಾಕಿದರು. ರಾಜ್ಯದಲ್ಲಿ 136 ಶಾಸಕರನ್ನು ಆಯ್ಕೆ ಮಾಡಿದ ಹೆಗ್ಗಳಿಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲುತ್ತದೆ. ಇಂತಹ ಭಾಗ್ಯಗಳ ವಿಧಾತ ಸಿದ್ದರಾಮಯ್ಯ ಸರ್ಕಾರದ ಹೆಸರು ಕಡಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.
40 ಪರ್ಸೆಂಟ್ ಸರ್ಕಾರ ಕಂಡು ಬೇಸತ್ತ ರಾಜ್ಯದ ಜನತೆ 136 ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದರು. ಇಂತಹ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿರುವುದರ ಹಿಂದೆ ಕುತಂತ್ರ ಅಡಗಿದೆ. ಹಾವೇರಿ ಸಂಸದ ಬಸವರಾಜ ಬೊಮ್ಮಾಯು ಸಿಎಂ ಆಗಿದ್ದ ಸಂದರ್ಭದಲ್ಲೇ ಹಗರಣ ನಡೆದಿತ್ತು ಎನ್ನುವುದಾದರೆ ಆಗ ಅವರು ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಯು.ಬಿ.ಬಣಕಾರ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆರ್.ಶಂಕರ, ಮಾಜಿ ಶಾಸಕರಾದ ನೆಹರು ಓಲೇಕಾರ, ಅಜ್ಜಂಪೀರ್ ಖಾದ್ರಿ, ಪ್ರಮುಖರಾದ ಎಸ್.ಆರ್.ಪಾಟೀಲ, ಪ್ರಕಾಶಗೌಡ ಪಾಟೀಲ, ಎಂ.ಎಂ.ಮೈದೂರ, ಹನುಮಂತ ಬಂಡಿವಡ್ಡರ, ಸೇರಿದಂತೆ ನೂರಾರು ಕಾರ್ಯಕರ್ತರು, ಸಿಎಂ ಅಭಿಮಾನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net