

ಹಾವೇರಿ: ಹೆಚ್ಚುವರಿ ಅಕ್ಕಿ ನೀಡಲು ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ನಗರದ ಹೊಸಮವನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟಿಸಲಾಯಿತು. ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಕನಸು ಈಡೇರಬಾರದು ಎಂದು ಕೇಂದ್ರ ಸರ್ಕಾರ ಬೆಂಬಲಿಸುತ್ತಿಲ್ಲ. ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡದೇ ಅಕ್ಕಿ ನೀಡದಂತೆ ಎಫ್‌ಸಿಐಗೆ ನಿರ್ದೇಶನ ಮಾಡಿದೆ. ಬಡವರಿಗೆ ಅಕ್ಕಿ ಸಿಗಬಾರದು ಎಂದು ಹೀಗೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸುವ ಕೆಲಸ ಮಾಡುತ್ತಿದೆ. ಬಡವರಿಗೆ ಅನ್ಯಾಯ ಆಗಲು ನಾವು ಬಿಡಲ್ಲ. ಎಲ್ಲಿಂದಾದರೂ ಅಕ್ಕಿ ತರುತ್ತೇವೆ ಎಂದರು.
ಶಾಸಕ ಯು.ಬಿ.ಬಣಕಾರ ಮಾತನಾಡಿ, ರಾಜ್ಯದಿಂದ ಕೆಂದ್ರಕ್ಕೆ ತೆರಿಗೆ ಹೋಗುತ್ತದೆ. ಹೀಗಿದ್ದರೂ ಕೇಂದ್ರದ ಈ ರೀತಿಯ ನಿರ್ಧಾರ ಸರಿಯಲ್ಲ. ರಾಜ್ಯದಲ್ಲಿ ಹೀನಾಯವಾಗಿ ಸೋತರೂ ಬಿಜೆಪಿ ಈಗಲೂ ಬುದ್ದಿ ಕಲಿತಿಲ್ಲ. ಬಡವರಿಗೆ ನೀಡುವ ಹತ್ತು ಕೆಜಿ ಅಕ್ಕಿಗೂ ಕುತ್ತು ತರಲು ಮುಂದಾಗಿದ್ದಾರೆ. ಜನ ವಿರೋಧಿ ನೀತಿ ಕೈಬಿಡದಿದ್ದರೆ ಕೇಂದ್ರ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನ ಬುದ್ದಿ ಕಲಿಸಲಿದ್ದಾರೆ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಎಫ್‌ಸಿಐ ಅಕ್ಕಿ ಕೊಡಲು ಮೊದಲು ಒಪ್ಪಿತ್ತು. ಈಗ ಕೇಂದ್ರದ ನಿರ್ದೇಶನದ ಮೇರೆಗೆ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದೆ. ನಮಗೆ ಪ್ರತಿ ತಿಂಗಳು ಎರಡು ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು. ಆ ಹಣಕಾಸು ಕೂಡಿಸಿ ಜುಲೈ 1ರಿಂದ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿತ್ತು. ಐದು ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದ್ದರೂ ಕೇಂದ್ರ ಅಡ್ಡಗಾಲು ಹಾಕಲು ಮುಂದಾಗಿದೆ ಎಂದು ಆರೋಪಿಸಿದರು.
ಶಾಸಕ ರುದ್ರಪ್ಪ ಲಮಾಣಿ, ಪ್ರಕಾಶ ಕೋಳಿವಾಡ, ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಪ್ರಕಾಶಗೌಡ ಪಾಟೀಲ, ಸಂಜೀವಕುಮಾರ ನೀರಲಗಿ, ಇತರರಿದ್ದರು.