ಪ್ರತಿಜ್ಞೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ; ಹಾವೇರಿ ಲೋಕಸಭಾ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕರೆ

21 HVR 8 A
Published on

ಹಾವೇರಿ: ಕಳೆದ ಮೂರೂ ಲೋಕಸಭಾ ಚುನಾವಣೆಗಳಿಗಿಂತ ಈ ಚುನಾವಣೆ ವಿಭಿನ್ನವಾಗಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಕೆಲಸವನ್ನು ಕಾರ್ಯಕರ್ತರು ಪ್ರತಿಜ್ಞೆ ಮಾಡಿ ಮಾಡಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ತೋಟಗಾರಿಕಾ ಸಚಿವ, ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಎಸ್.ಎಸ್.ಮಲ್ಲಿಕಾರ್ಜುನ ಕರೆ ನೀಡಿದರು.
ನಗರದ ಸಜ್ಜನರ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಮುಖಂಡರ, ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತಬಾಡಿದರು.
ಈ ಹಿಂದಿನ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲು, ಸೋಲಲು ನಮ್ಮ ಮುಖಂಡರು ಹಾಗೂ ಕಾರ್ಯಕರ್ತರೇ ಕಾರಣರಾಗಿದ್ದಾರೆ. ಕಾರ್ಯಕರ್ತರು ಹುಷಾರಾಗಬೇಕು. ಮುಖಂಡರಿಂದಲೇ ನಮ್ಮ ಅಭ್ಯರ್ಥಿ ಸೋಲುವಂತಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಜಾಗರೂಕರಾಗಬೇಕು ಎಂದರು.
ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವಾರಕ್ಕೆ ಗ್ಯಾರಂಟಿ ಜಾರಿ ಮಾಡಿ ಎಂದು ಒತ್ತಾಯಿಸಲು ಶುರುಮಾಡಿದರು. ನಿಮ್ಮ ಕೈಯಲ್ಲಿ ಆಗಲ್ಲ ಎಂದರು. ಹೇಗಾದರೂ ಮಾಡಿ ತಡೆಯಲು ಯತ್ನಿಸಿದರು. ನಮ್ಮ ಸರ್ಕಾರ ಎಲ್ಲವನ್ನೂ ಎದುರಿಸಿ, ಹಣಕಾಸು ಹೊಂದಾಣಿಕೆ ಮಾಡಿಕೊಂಡು ಗ್ಯಾಂರಂಟಿ ಜಾರಿಗೊಳಿಸಿದ ಬಳಿಕ ಎಲ್ಲರೂ ಸುಮ್ಮನಾದರು ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಶೇ.92ರಷ್ಟು ಜನರಿಗೆ ಹಣ, ಅಕ್ಕಿ, ವಿದ್ಯುತ್, ಉಚಿತ ಬಸ್ ಪ್ರಯಾಣ ಸೇವೆ ಕೊಟ್ಟಿದ್ದೇವೆ. ಶಕ್ತಿ ಯೋಜನೆ ಬಗ್ಗೆ ಭಾರಿ ಟೀಕೆ ಮಾಡಿದರು. ಆದರೆ, ಇಂದು ಮೂರು ತಿಂಗಳಲ್ಲಿ 60 ಕೋಟಿ ಮಹಿಳೆಯರು ಪ್ರಯಾಣ ಬೆಳೆಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 50 ಸಾವಿರ ಕೋಟಿ ರೂ. ಬಡವರ ಮನೆ ತಲುಪಿದೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದರು.
ಸಲೀಂ ಅಹ್ಮದ್ ಮಾತನಾಡಿ, ನರೇಂದ್ರ ಮೋದಿ ಅವರು 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂದರು. ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದರು. ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದೆ. ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ವಿಧಾನಸಭೆಯಂತೆ ಲೋಕಸಭೆಯಲ್ಲೂ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ, ಹಾವೇರಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಮಾಜಿ ಸಂಸದರಾದ ಮಂಜುನಾಥ ಕುನ್ನೂರ, ಪ್ರೊ.ಐಜಿ.ಸನದಿ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಡಿ.ಆರ್.ಪಾಟೀಲ, ಎಸ್.ಆರ್.ಪಾಟೀಲ, ಡಾ.ಆರ್.ಎಂ.ಕುಬೇರಪ್ಪ, ಸೋಮಣ್ಣ ಬೇವಿನಮರದ, ಇತರರಿದ್ದರು.

ಕೋಟ್:
ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರ ಎಂದು ಘೋಷಿಸಲಾಗಿದೆ. ಕೇಂದ್ರದ ನಿಯಮಾವಳಿ ಪ್ರಕಾರ 5 ಸಾವಿರ ಕೋಟಿ ರೂ. ಕೇಳಿದರೂ ಒಂದು ನಯಾಪೈಸೆ ಹಣ ಬಿಡುಗಡೆ ಮಾಡಲಿಲ್ಲ. ಬಿಜೆಪಿಯ 25 ಎಂಪಿಗಳು ಯಾಕೆ ಸುಮ್ಮನೆ ಕುಳಿತಿದ್ದಾರೆ. ಕನಿಷ್ಠ 100 ಕೋಟಿ ಬಿಡುಗಡೆ ಮಾಡಿಸಲಾಗಲಿಲ್ಲ. ಜನ ಸುಮ್ಮನೆ ಬಿಡಲ್ಲ. ಬರುವ ದಿನ ತಕ್ಕ ಶಾಸ್ತಿ ಕಲಿಸುತ್ತಾರೆ.
ಎಚ್.ಕೆ.ಪಾಟೀಲ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net