

ಹಾವೇರಿ: ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿ, ಜಾತಿ, ಧರ್ಮದ ಭಾವನೆಯನ್ನು ಕೆರಳಿಸಿ, ತಪ್ಪು ದಾರಿಗೆ ಎಳೆಯುವ ಮೂಲಕ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿರುವ ಬಿಜೆಪಿಯನ್ನು ಸೋಲಿಸಿ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಿ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕಿಂತ ಕಡಿಮೆ ಏನಿಲ್ಲ. ಜಗಜ್ಯೋತಿ ಬಸವೇಶ್ವರರು, ಸೂಫಿ ಸಂತರು, ಭಗವದ್ಗೀತೆ, ಕುರಾನ್, ಬೈಬಲ್ ಮಹಾಗ್ರಂಥಗಳ ಮೂಲ ಆಶಯಗಳನ್ನು ಉಳಿಸುವ ಸಲುವಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸಿ. ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಬಿಜೆಪಿಯ ಸುಳ್ಳು ಆರೋಪಗಳ ಬಗ್ಗೆ ಕಿವಿಗೊಡಬೇಡಿ. ನಮ್ಮ ಪ್ರಣಾಳಿಕೆ ಈಡೇರಿಸುವುದು ಶತಸಿದ್ಧ ಎಂದರು.
ಪ್ರಧಾನಿ ನರೇಂದ್ರ ಮೋದಿ ‘ಅಚ್ಚೇ ದಿನ್ ಆಯೇಗಾ’ ಅಂತ ಹೇಳಿದರು. ರೈತರ ಆದಾಯ ದ್ವಿಗುಣ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ದರು. ಇದನ್ನು ನಂಬಿದ ಜನರು ಮತ ಹಾಕಿ ಬಹುಮತ ನೀಡಿದರು. ಹೀಗೆ ಬಿಜೆಪಿಯವರು ಪ್ರತಿಸಲ ಭಾವನಾತ್ಮಕ ವಿಷಯಗಳಿಂದ ಚುನಾವಣೆ ಎದುರಿಸುತ್ತಿದ್ದಾರೆ ಎಂದರು.
2018ರಲ್ಲಿ ಪುಲ್ವಾಮಾ ಘಟನೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು. ದೇಶ ರಕ್ಷಣೆಯಲ್ಲಿ ಮೋದಿಯೇ ಶ್ರೇಷ್ಠ ಅಂತ ನಂಬಿಕೆ ಹುಟ್ಟಿಸಿದರು. 300 ಕೆ.ಜಿ. ಆರ್‌ಡಿಎಕ್ಸ್ ದೇಶಕ್ಕೆ ಬಂದಿದ್ದು ಭದ್ರತಾ ವೈಫಲ್ಯವಲ್ಲವೇ? ಸೈನಿಕರ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡಲಿಲ್ಲ. ಈ ಬಾರಿ ಅಂತಹ ಘಟನೆಯ ವಿಷಯ ಸಿಕ್ಕಿಲ್ಲ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಮೋದಿ ಹಗುರ ಹೇಳಿಕೆ ನೀಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ನೇಹಾ ಹತ್ಯೆ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಜರಿದರು.
ಶೇ.40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಆರೋಪ ಮಾಡಿದ ಮೇಲೆ, ಜನರು ವಿಧಾನಸಭಾ ಚುನಾವಣೆಯಲ್ಲಿ ತೀರ್ಪು ನೀಡಿ, ಬಿಜೆಪಿ ಸರ್ಕಾರವನ್ನು ಕಿತ್ತೆಸದರು. ನಾವು ಯಾರಿಂದಲೂ ಹಣ ಪಡೆದಿಲ್ಲ ಎಂಬುದನ್ನು ಬಿಜೆಪಿಯವರು ಹೇಳದೆ ಮೌನವಾಗಿದ್ದಾರೆ ಅಂದರೆ ತಪ್ಪು ಒಪ್ಪಿಕೊಂಡಿದ್ದಾರೆ ಅಂತ ಅರ್ಥ. ಬಿಜೆಪಿಯವರು ಕಳೆದ ವರ್ಷ ಎಸ್ಸಿ ಎಸ್ಟಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.ಯನ್ನು ಯಾವುದಕ್ಕೆ ಬಳಕೆ ಮಾಡಿದ್ದಾರೆ ಎಂಬ ಬಗ್ಗೆ ಮೊದಲು ಉತ್ತರಿಸಲಿ ಎಂದರು.
22 ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಯಾವ ಅಭಿವೃದ್ಧಿ ಮಾಡಿದ್ದಾರೆ, ಕೋವಿಡ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟು ಜನ ಸತ್ತರು. ಅಧಿಕಾರ, ಖಜಾನೆ ಕೀಲಿ ಕೈ ಕೈಯಲ್ಲಿದ್ದಾಗ ಜಿಲ್ಲೆಗೆ, ರಾಜ್ಯಕ್ಕೆ ಬೊಮ್ಮಾಯಿ ಕೊಡುಗೆ ಏನು ? ಎಂದು ಮಾನೆ ಪ್ರಶ್ನಿಸಿದರು. ರಾಜ್ಯಕ್ಕೆ 18 ಸಾವಿರ ಕೋಟಿ ಬರ ಪರಿಹಾರ ನೀಡಿಲ್ಲ. 15ನೇ ಹಣಕಾಸು ಯೋಜನೆಯ ಅನುದಾನ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರವನ್ನು ಕೇಳಲಿಲ್ಲ ಎಂದರು.
ಕಳೆದ 20 ವರ್ಷದಿಂದ ಬಿಜೆಪಿ ಸಂಸದರ ಆಡಳಿತದಿಂದ ಕ್ಷೇತ್ರ ಹಿಂದಕ್ಕೆ ಹೋಗಿದೆ. ಗಡ್ಡದೇವರಮಠ ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ. ಉತ್ಸಾಹಿ ಯುವಕರಿದ್ದು, ಕೇಂದ್ರದ ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಒಂದು ಅವಕಾಶ ಮಾಡಿಕೊಡಿ. ಅವರು ಮಾದರಿ ಕ್ಷೇತ್ರ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಎಲ್ಲ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಕ್ಷೇತ್ರದಾದ್ಯಂತ ಜನಬೆಂಬಲ ವ್ಯಕ್ತವಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿವೆ. ಏ.28ರಿಂದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಈ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಇತರರಿದ್ದರು.
ಹಸಿವು ಮುಕ್ತ ಪಟ್ಟಿಯಲ್ಲಿ ಹಿನ್ನೆಡೆ
ಪ್ರಶಾಂತ ಭೂಷಣ ವರದಿ ಪ್ರಕಾರ ವರ್ಡ್ ಹ್ಯಾಪಿನೆಸ್ ಇಂಡೆಕ್ಸ್(ವಿಶ್ವದ ಸುಖದ ಇಂಡೆಕ್ಸ್)ನಲ್ಲಿ 2014ರಲ್ಲಿ ಭಾರತ 111ನೇ ಸ್ಥಾನದಲ್ಲಿತ್ತು. ಈಗ 10 ವರ್ಷದಲ್ಲಿ 126ನೇ ಸ್ಥಾನಕ್ಕೆ ಇಳಿದಿದೆ. ಹಸಿವು ಮುಕ್ತ ಪಟ್ಟಿಯಲ್ಲಿ 2014ರಲ್ಲಿ 55ನೇ ಸ್ಥಾನದಲ್ಲಿದ್ದ ಭಾರತ ಇಂದು 111ನೇ ಸ್ಥಾನಕ್ಕೆ ಇಳಿದಿದೆ. 60 ಲಕ್ಷ ಕೋಟಿ ಇದ್ದ ಸಾಲ ಈಗ 165 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಮೇ 3ರಂದು ಸಿಎಂ ಸಮಾವೇಶ
ರಾಣೆಬೆನ್ನೂರ ನಗರದ ಉರ್ದು ಮೈದಾನದಲ್ಲಿ ಮೇ 3ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಏ.29ರಂದು ಹಾವೇರಿಯ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸತೀಶ ಜಾರಕಿಹೊಳಿ ಅವರ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.